ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಅ.28:ದೈವ ಶಕ್ತಿಯ ಫಲವಾಗಿ ಪ್ರಭು ಶ್ರೀರಾಮನ ಕುರಿತು 24 ಸಾವಿರ ಕಾವ್ಯವನ್ನು ವಾಲ್ಮೀಕಿ ಮಹರ್ಷಿ ಬರೆದಿದ್ದರು. ಇದೊಂದು ಅಸಾಧಾರಣ ಕೆಲಸವಾಗಿತ್ತು, ರಾಮಾಯಣದಲ್ಲಿರುವ ಸುಂದರ ಕಾಂಡವನ್ನು ವರ್ಷಕ್ಕೆ ಎರಡು ಬಾರಿ ಪಠಣ ಮಾಡಿ, ಲೋಕ ಕಲ್ಯಾಣಕ್ಕಾಗಿ ನಾಡಿನಲ್ಲಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥನೆ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ತಾಲ್ಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪುಪ್ಪನಮನ ಸಲ್ಲಿಸಿ ಅವರು ಮಾತನಾಡಿದರು.
‘ಕಾಲ ಜ್ಞಾನದ ಮೂಲಕವೇ ಭವಿಷ್ಯದ ಸಂಗತಿಗಳ ಕುರಿತು ದಾಖಲಿಸಿದ ಮಹನೀಯ ವಾಲ್ಮೀಕಿಯಾಗಿದ್ದು, ಜಗತ್ತಿನಲ್ಲಿ ಸೂರ್ಯ ಚಂದ್ರರೂ ನೋಡಿರುವ ಅತ್ಯಂತ ಶ್ರೇಷ್ಠ ರಾಜರು, ರಾಮ, ಲಕ್ಷ್ಮಣರಾಗಿದ್ಧಾರೆ. ಸೀತಾ ಮಾತೆಗೆ ಆಶ್ರಯ ನೀಡಿದಾಗ ಪ್ರಭು ಶ್ರೀರಾಮರನ್ನೇ ಮೀರಿಸುವಂತೆ ಅವರ ಮಕ್ಕಳಾದ ಲವ, ಕುಶರನ್ನು ಬೆಳೆಸಿದ್ದರು’ ಎಂದು ತಿಳಿಸಿದರು.
‘ಇಂದಿಗೂ ನಿತ್ಯ ಶ್ರೀರಾಮಚಂದ್ರದ ಕೋಟಿನಾಮವನ್ನು ಬರೆಯುತ್ತಿದ್ದೇನೆ. ಕಳೆದ 40 ವರ್ಷಗಳಿಂದ ವರ್ಷಕ್ಕೆ 2 ಬಾರಿ ಸುಂದರ ಖಂಡವನ್ನು ಓದಲಾಗುತ್ತದೆ. ಅದಕ್ಕಾಗಿ 6 ಗಂಟೆ ಸತತವಾದ ಶ್ರದ್ಧೆ ಇರಬೇಕು. ಇದರಿಂದಾಗಿ ದೈವ ಬಲ ಪ್ರಾಪ್ತಿಯಾಗುತ್ತದೆ’ ಎಂದರು.
ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಮಾತನಾಡಿ, ‘ಸಂವಿಧಾನ ಪ್ರತಿಯೊಬ್ಬರ ಭಗವದ್ಗೇತೆ ಆಗಬೇಕಿದೆ. ಎಲ್ಲ ಕ್ಷೇತ್ರದಲ್ಲಿಯೂ ಮೀಸಲಾತಿ ಕಲ್ಪಿಸುವ ಮೂಲಕ ತಳವರ್ಗಗಳ ಅಭ್ಯುದಯಕ್ಕೆ ಸಂವಿಧಾನದ ರಕ್ಷಣೆ ಮಾಡಬೇಕು. ಧಾರ್ಮಿಕ ಭಾವನೆಯಲ್ಲಿ ಸಮಾಜ ಒಡೆಯುವವರಿಂದ ದೇಶ ರಕ್ಷಿಸೋಣ, ಎಲ್ಲರೂ ವಾಲ್ಮೀಕಿ ಮಹರ್ಷಿಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ’ ಎಂದು ಕರೆ ನೀಡಿದರು.
ರಾಜ್ಯದ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ, ಮಹಾ ನಗರ ಪಾಲಿಕೆಗಳಿಗೆ ಯಾವ ರೀತಿ ಅನುದಾನ ಹಂಚಿಕೆಯಾಗಬೇಕು ಎಂಬ ವರದಿ ನೀಡಬೇಕಿದ್ದು, ಈಗಾಗಲೇ ಇಲ್ಲಿ ಸೇವೆ ಸಲ್ಲಿಸಿರುವ ಜನಪ್ರತಿನಿಧಿಗಳು ಪೂರಕ ಮಾಹಿತಿ, ಸಲಹೆ ನೀಡಿ ಅಧಿಕಾರ ವಿಕೇಂದ್ರಿಕರಣ ಹೊಸ ಅಧ್ಯಯನಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಅಭಿನಂದಿಸಲಾಯಿತು. ಕೋಟೆ ವೇಣುಗೋಪಾಲಸ್ವಾಮಿ ದೇಗುಲದಿಂದ ಅಂಬೇಡ್ಕರ್ ಭವನದ ವರೆಗೂ ತಾಲ್ಲೂಕಿನ 24 ಪಂಚಾಯಿತಿಯಿಂದ ಮಾಡಲಾದ ಮಹರ್ಷಿ ವಾಲ್ಮೀಕಿರವರ ಪಲ್ಲಕಿಗಳು ಉತ್ಸವ ನಡೆಯಿತು. ವಿವಿಧ ಜಾನಪದ ಕಲಾತಂಡಗಳು, ತಮಟೆ ನಾದನಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು.
ಜಿಪಂ ಉಪನಿರ್ದೇಶಕ ಟಿ.ಕೆ.ರಮೇಶ್, ತಹಶೀಲ್ದಾರ್ ಶಿವರಾಜ್, ತಾಪಂ ಇಓ ಶ್ರೀನಾಥ್ ಗೌಡ, ಪುರಸಭೆ ಮುಖ್ಯಾಧಿಕಾರಿ ದೊಡ್ಡಮಲವಯ್ಯ, ಮಾಜಿ ಜಿಲ್ಲಾ. ಪಂ.ಅಧ್ಯಕ್ಷ ಚನ್ನಹಳ್ಳಿ ರಾಜಣ್ಣ, ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷ ನಾಗೇಶ್ ಬಾಬು, ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಸಮುದಾಯದ ಮುಖಂಡರಾದ ಡಾ. ಮೂರ್ತಿ, ಡಿ.ಎಂ.ದೇವರಾಜು, ಯರ್ತಿಗಾನಹಳ್ಳಿ ಶಿವಣ್ಣ, ಮುನಿಯಪ್ಪ, ಜ್ಯೋತಿ, ಡಾ.ನರಸಿಂಹಮೂರ್ತಿ, ಮಂಜುಳಾ, ರಾಜಕುಮಾರ್, ಕಾಂಗ್ರೆಸ್ ಮುಖಂಡರಾದ ಎಂ.ಎನ್.ನಾರಾಯಣಸ್ವಾಮಿ, ರಾಮಚಂದ್ರಪ್ಪ, ಲೋಕೇಶ್ ಸೇರಿದಂತೆ ಇತರರು ಇದ್ದರು.