ಸುದ್ದಿಮೂಲ ವಾರ್ತೆ
ಮೈಸೂರು,ಸೆ.10: ಆ ಗ್ರಾಮದ ಎಲ್ಲೆಲ್ಲೂ ಸಡಗರ, ಸಂಭ್ರಮ. ಒಂದು ರೀತಿ ಹಬ್ಬದ ವಾತಾವರಣ ಅಲ್ಲಿ ಸೃಷ್ಟಿಯಾಗಿತ್ತು. ಊರಿಗೆ ಬಂದ ಬಸ್ಗೆ ಹೂವಿನ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಗ್ರಾಮಸ್ಥರು ಸಂಭ್ರಮಿಸಲು ಶತಮಾನದ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗ್ರಾಮಕ್ಕೆ ಬಂದಿದ್ದು. ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಗಣಿಶೆಡ್, ಕೆ.ಜಿ ಗುಂಡಿ ಮಾರ್ಗವಾಗಿ ಕೆಎಸ್ಆರ್ಟಿಸಿ ಬಸ್ ಸಂಚಾರವೇ ಇರಲಿಲ್ಲ. ಆ ಊರಿಗೆ ಮೂರುವರೇ, ನಾಲ್ಕು ಕಿಲೋಮೀಟರ್ ನಡೆದೇ ಸಾಗಬೇಕಿತ್ತು. ತಾತ, ಮುತ್ತಾತರ ಕಾಲದಿಂದಲೂ ಬಸ್ ಗಾಗಿ ಊರಿನ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳನ್ನು, ಸಾರಿಗೆ ಇಲಾಖೆಯನ್ನು ಎಡತಾಕಿ, ಮನವಿ ಪತ್ರ ಕೊಟ್ಟಿದ್ದು ಲೆಕ್ಕವೇ ಇಲ್ಲ.
ತಮ್ಮ ಗ್ರಾಮಕ್ಕೆ ಬಸ್ ಗಳು ಬರುತ್ತವೆ ಎಂಬ ಆಸೆ-ನಿರೀಕ್ಷೆಯನ್ನೇ ಬಿಟ್ಟಿದ್ದ ಗ್ರಾಮಸ್ಥರು ಶತಮಾನದಿಂದಲೂ 4 ಕಿಲೋ ಮೀಟರ್ ದೂರದ ಹುಣಸೂರು ರೋಡ್ ಗೆ ತೆರಳಿ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬಂದ ಆ ಒಂದು ಕರೆಗೆ ಸ್ಪಂದಿಸಿ ಆ ಊರಿಗೆ ಬಸ್ ಸಂಚಾರದ ವ್ಯವಸ್ಥೆ ಮಾಡಿದ್ದಾರೆ.
ಹೇಗೆ ಕರೆ ?
ಒಂದು ದಿನ ತಮ್ಮ ಊರಿನ ಗ್ರಾಮಸ್ಥರ ಮೇಲೆ ಹುಲಿ ದಾಳಿಯಾಗಿರೋ ವಿಚಾರ ತಿಳಿದಂತೆ ತಸ್ಲಿಮ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ನಂಬರ್ ಪಡೆದು ನೇರವಾಗೇ ಕರೆ ಮಾಡುತ್ತಾರೆ. ಅತ್ತ ಕರೆ ಸ್ವೀಕರಿಸಿದಂತ ಸಾರಿಗೆ ಸಚಿವರಿಗೆ ಕಣ್ಣೀರಿಡುತ್ತಲೇ ತಮ್ಮ ಊರಿಗೆ ಬಸ್ ಇರದ ಕಷ್ಟ, ಅದರಿಂದ ಗ್ರಾಮಸ್ಥರಿಗೆ, ಶಾಲಾ ಮಕ್ಕಳಿಗೆ ಆಗುತ್ತಿರುವಂತ ತೊಂದರೆಯನ್ನು ಗೋಳೋ ಎಂದು ಕಣ್ಣೀರು ಹಾಕಿಕೊಂಡು ಅವಲತ್ತುಕೊಂಡಿದ್ದಾರೆ.
ಅಲ್ಲದೇ, ಹೆಚ್.ಡಿ ಕೋಟೆ ತಾಲೂಕಿನಿಂದ ಗಣಿಶೆಡ್, ಕೆ.ಜಿ ಗುಂಡಿ ಮಾರ್ಗವಾಗಿ ಸಾರಿಗೆ ಬಸ್ ಸಂಚಾರದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ಕೂಡಲೇ ಹೆಚ್.ಡಿ ಕೋಟೆಯಿಂದ ಗಣಿಶೆಡ್ಡು, ಕೆ.ಜಿ ಗುಂಡಿ ಮಾರ್ಗವಾಗಿ ಕೆಎಸ್ಆರ್ಟಿಸಿ ಬಸ್ ಸಂಚಾರದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಸಾರಿಗೆ ಸಚಿವರ ಸೂಚನೆ ಮೇರೆಗೆ ಅಲರ್ಟ್ ಆದಂತೆ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು, ಸಾರಿಗೆ ಸಚಿವರ ಸೂಚನೆಯಂತೆ ಬಸ್ ವ್ಯವಸ್ಥೆ ಕಲ್ಪಿಸೋದಕ್ಕೆ ಕ್ರಮವಹಿಸಿದ್ದಾರೆ.
ಇದೀಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ಫಲವಾಗಿ ಹೆಚ್.ಡಿ ಕೋಟೆ ತಾಲೂಕಿನಿಂದ ಗಣಿಶೆಡ್ಡು, ಕೆ.ಜಿ ಗುಂಡಿ ಮಾರ್ಗವಾಗಿ ದಿನಕ್ಕೆ ಎರಡು ಬಾರಿ ಸಂಚರಿಸೋದಕ್ಕೆ ಕೆಎಸ್ಆರ್ಟಿಸಿ ಬಸ್ ಆರಂಭವಾಗಿದೆ. ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕು ಗಣಿಶೆಡ್ ಗ್ರಾಮದ ಕಲಂದರ್ ಪಾಷಾ, ಮೊಹಮ್ಮದ್ ಗಣಿ, ಚಂದ್ರೇ ಗೌಡ್ರು, ಬೂದನೂರು ಮಹದೇವ್, ಟೈಗರ್ ಬ್ಲಾಕ್ ಗ್ರಾಮದಿಂದ ಇವನ್ ರಾಜ್ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಟೈಗರ್ ಬ್ಲಾಕ್ ಸುಬ್ರಮಣಿ, ಕೆ.ಜಿ ಗುಂಡಿ ಮಂಜು ಮತ್ತು ಸಣ್ಣ ಸ್ವಾಮಿ ನಾಯಕ, ಲೋಕೇಶ್ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಸ್ಥರು ನೆರವಾಗಿದ್ದಾರೆ. ಅವರೆಲ್ಲರಿಗೂ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.