ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.18: ಹೆಚ್ಚುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಪಾತ್ರ ಬಹಳ ಮುಖ್ಯವಾಗಿದೆ. ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆ-ಅಧ್ಯಯನ ಮತ್ತು ವಿಸ್ತರಣಾ ಕಾರ್ಯಗಳಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ದೇಸಿ ಸಮ್ಮೇಳನ ಮತ್ತು ಬೇಕಿಂಗ್ ಮೌಲ್ಯ ವರ್ಧನಾ ಸಂಸ್ಥೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಹಸಿರು ಕ್ರಾಂತಿ ಬಳಿಕ ದೇಶ ಆಹಾರ ಸ್ವಾವಲಂಭನೆಯನ್ನು ಸಾಧಿಸಿತು. ಅದಕ್ಕೂ ಮೊದಲು ಅವಲಂಭನೆ ಇತ್ತು. ಇತ್ತೀಚಿಗೆ ನಿಧನರಾದ ಕೃಷಿತಜ್ಞ ಸ್ವಾಮಿನಾಥನ್ ಅವರು ಈ ಹಸಿರು ಕ್ರಾಂತಿಗೆ ಬಹಳಷ್ಟು ಕೊಡುಗೆ ನೀಡಿದ್ದರು. ಆಹಾರ ಉತ್ಪಾದನೆ ಇನ್ನಷ್ಟು ಹೆಚ್ಚಲು, ಗುಣಾತ್ಮಕ ಆಗಲು ಕೃಷಿ ವಿವಿಗಳ ಅಧ್ಯಯನ ಮತ್ತು ಸಂಶೋಧನೆಗಳು ಹೆಚ್ಚಾಗಬೇಕು ಎಂದರು.
ಖುಷ್ಕಿ ಭೂಮಿ ಅತಿ ಹೆಚ್ವು ಇರುವ ರಾಜ್ಯ ನಮ್ಮದು. ವಾತಾವರಣ ಬದಲಾವಣೆಯಿಂದ ರಾಜ್ಯ ನಿರಂತರವಾಗಿ ಅತಿವೃಷ್ಟಿ, ಅನಾವೃಷ್ಟಿಗೆ ತುತ್ತಾಗುತ್ತಿದೆ. ಈ ಕಾರಣಕ್ಕೇ ನಮ್ಮ ರೈತರಿಗೆ ಕೃಷಿ, ತಜ್ಞರು ಮತ್ತು ತಂತ್ರಜ್ಞರ ನೆರವು ಅತ್ಯಗತ್ಯ. ಇದಕ್ಕಾಗಿಯೇ ಕೃಷಿ ವಿವಿಗಳು ಹೆಚ್ಚು ಸಂಶೋಧನೆ ನಡೆಸಬೇಕು. ಸಂಶೋಧನೆಗಳು ರೈತರಿಗೆ ಪರಿಣಾಮಕಾರಿಯಾಗಿ ತಲುಪಬೇಕು. ಕಡಿಮೆ ಮಳೆಯಲ್ಲಿ, ಕಡಿಮೆ ನೀರಲ್ಲಿ ಎಂಥಾ ಬೆಳೆ ಬೆಳೆಯಬಹುದು, ಹವಾಮಾನ ವೈಪರೀತ್ಯಕ್ಕೆ ಬೆಳೆ ಹಾಳಾಗದಂತೆ ಏನು ಮಾಡಬೇಕು ಎನ್ನುವ ಕುರಿತಂತೆ ಹೆಚ್ಚೆಚ್ಚು ಅಧ್ಯಯನ, ಸಂಶೋಧನೆಗಳು ನಡೆದು ರೈತರಿಗೆ ತಲುಪುವಂಥಾಗಬೇಕು ಎಂದರು.
ಪ್ರಯೋಗಶಾಲೆಗಳಿಂದ ಕೃಷಿ ಭೂಮಿಗೆ ಏನು ತಲುಪಿದೆ, ಕೃಷಿ ಭೂಮಿಯ ಅನುಭವಗಳು ಮತ್ತು ಅಗತ್ಯಗಳು ಪ್ರಯೋಗ ಶಾಲೆಗಳಿಗೆ ಗೊತ್ತಾಗಬೇಕು. ಆಗ ಮಾತ್ರ ಸುಸ್ಥಿರ ಕೃಷಿ ಸಾಧ್ಯವಾಗುತ್ತದೆ. ಇದು ಸಾಧ್ಯವಾಗಬೇಕಾದರೆ ಪ್ರಯೋಗಾಲಯದಿಂದ ಕೃಷಿ ಭೂಮಿಗೆ ಪರಿಕಲ್ಪನೆಯಲ್ಲಿ ವೈಜ್ಞಾನಿಕ ಕೆಲಸಗಳನ್ನು ಕೃಷಿ ವಿವಿಗಳು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೃಷಿ ವಿಶ್ವವಿದ್ಯಾಲಯಗಳು ಅಭಿವೃದ್ಧಿ ಪಡಿಸಿರುವ ಹೊಸ ತಳಿಗಳು ರೈತರಿಗೆ ತಲುಪಿರುವ ಬಗ್ಗೆ ಕಾಲಕಾಲಕ್ಕೆ ಪರೀಕ್ಷೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಹೊಸ ತಳಿಗಳು ಅಭಿವೃದ್ಧಿ ಮಾಡಿ ಏನು ಪ್ರಯೋಜನವಾಗುವುದಿಲ್ಲ. ಸಕಾಲಕ್ಕೆ ವೈಮಾನಿಕ ಹವಾಮಾನ, ಮಳೆ, ರಸಗೊಬ್ಬರಗಳ ಬಳಕೆ, ನೀರಿನ ಬಳಕೆ ಇತ್ಯಾದಿಗಳ ಬಗ್ಗೆ ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಮಾಹಿತಿಯನ್ನು ಒದಗಿಸಿ, ರೈತರು ಕೃಷಿಯಲ್ಲಿ ಸ್ವಾವಲಂಬಿಗಳಾಗಿ ಬೆಳೆಯಲು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಅವರು ರೈತರನ್ನು ಸದೃಡಗೊಳಿಸಲು ಕೃಷಿ ವಿಶ್ವವಿದ್ಯಾಲಯಗಳ ಪಾತ್ರ ಬಹು ಮುಖ್ಯವಾಗಿದೆ. ಕೃಷಿ ವಿಶ್ವವಿದ್ಯಾಲಯಗಳು ಕಾಲಕಾಲಕ್ಕೆ ರೈತರಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಬಗ್ಗೆ ಮಾಹಿತಯನ್ನು ನೀಡುವುದರಿಂದ, ರೈತರು ಆರ್ಥಿಕವಾಗಿ ಸದೃಡಗೊಳ್ಳುತ್ತಾರೆ ಎಂದರು.
ಪ್ರಾಕೃತಿಕ ವೈಪರಿತ್ಯ ಸೇರಿದಂತೆ ಹಲವಾರು ಮಾಹಿತಿಗಳು ಕಾಲಕಾಲಕ್ಕೆ ರೈತರಿಗೆ ತಲುಪದೇ ಇರುವುದರಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಅಗತ್ಯ ಮಾಹಿತಿಯನ್ನು ಒದಗಿಸಿ, ಕೃಷಿಕರಿಗೆ ಹೊಸ ಸಂಶೋಧನೆ ಹಾಗೂ ತಂತ್ರಜ್ಞಾನದ ಮೂಲಕ ನೆರವಾಗುವ ಕೆಲಸವನ್ನು ಕೃಷಿ ವಿಶ್ವವಿದ್ಯಾಲಯಗಳು ಮಾಡಬೇಕು ಎಂದರು.
ರೈತರು ಸಹ ಕೃಷಿ ವಿಸ್ವವಿದ್ಯಾಲಯಗಳು ನೀಡುವ ಸಲಹೆ ಸೂಚನೆ ಹಾಗೂ ಮಾಹಿತಿಯನ್ನು ಸರಿಯಾಗಿ ಬಳಸಿಕೊಂಡು ಲಭ್ಯ ತಂತ್ರಜ್ಞಾನದ ಮೂಲಕ ವ್ಯವಸ್ಥಿತ ಬೇಸಾಯ ಅನುಸರಿಸಿದರೆ ಖಂಡಿತ ಲಾಭ ಗಳಿಕೆ ಸಾಧ್ಯವಿದೆ. ಅಲ್ಲದೆ ಉದ್ಯೋಗದಾತರೂ ಆಗಬುದಾಗಿದೆ.
ಬೇಕರಿ ಉತ್ಪನ್ನಗಳಿಗೆ ಎಲ್ಲೆಡೆ ಬೇಡಿಕೆ ವೃದ್ದಿಸುತ್ತಿದೆ. ಆದರೆ ದೇಸಿಯ ಆಹಾರ ಉತ್ಪನ್ನಗಳನ್ನು ಹೆಚ್ಚಾಗಿ ಬಳಸಿಕೊಂಡು ಮೌಲ್ಯ ವರ್ಧನೆ ಮಾಡುವ ಮೂಲಕ ನಮ್ಮ ರೈತರಿಗೆ ನೆರವಾಗಬೇಕು ಎಂದು ಸಚಿವರು ಸಲಹೆ ನೀಡಿದರು.
ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಮಾತನಾಡಿ ರೈತರು ಮತ್ತು ಕೃಷಿ ವಲಯವು ಅಭಿವೃದ್ದಿಯಾಗದೆ ದೇಶದ ಅಭಿವೃದ್ದಿಯಾಗದು. ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದಾಯ ದ್ವಿಗುಣವಾಗುವ ಬದಲು ಖರ್ಚು ದ್ವಿಗುಣವಾಗುತ್ತಿದೆ. ಆದಾಯಕ್ಕಿಂತ ನಷ್ಟವನ್ನು ಅನುಭವಿಸುತ್ತಿದ್ದಾರೆ.
ಕೃಷಿ ಪರಿಸರ ಪರಿಸ್ಥಿತಿಗಳು, ಕೃಷಿ ಯಂತ್ರೋಪಕರಣಗಳು, ಸ್ಥಳೀಯ ಬೆಳೆಗಳ ಉತ್ಪಾದನೆ, ಕೃಷಿ ಸಂಬಂಧಿಸಿದ ಯೋಜನೆಗಳು, ಕ್ಷೇತ್ರ ಭೇಟಿ, ಹೊಸ ತಂತ್ರಜ್ಞಾನದ ಬಗ್ಗೆ ಕೃಷಿ ವಿಶ್ವವಿದ್ಯಾನಿಲಯವು ರೈತರಿಗೆ ಅರಿವು ಮೂಡಿಸಬೇಕು. ಪ್ರಗತಿಪರ ರೈತರಿಗೆ ತಂತ್ರಜ್ಞಾನದ ಮಾಹಿತಿಯನ್ನು ನೀಡಬೇಕು. ಕೃಷಿ ಕ್ಷೇತ್ರದ ಬೆಳವಣಿಗೆಗೆ ಸರ್ಕಾರವು ಸಂಪೂರ್ಣ ಸಹಕಾರ ನೀಡುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ಮೇಳ-2023ರ ಲಾಂಛನವನ್ನು ಬಿಡುಗಡೆ ಮಾಡಿದರು. ಜೈವಿಕ ಸರಿರಿ- ಮೆಕ್ಕೆ ಜೋಳದ ದಿಂಡಿನ ಪುಡಿಯಿಂದ ವೈಜ್ಞಾನಿಕವಾಗಿ ತಯಾರಿಸಲ್ಪಟ್ಟ ಜೈವಿಕ ಗೊಬ್ಬರ ಹಾಗೂ ಕೃಷಿ ಬೆಳೆಗಳ ಸುಧಾರಿತ ಬೇಸಾಯ ಪದ್ದತಿಗಳು ಪುಸ್ತಕ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಹೈದ್ರಾಬಾದ್ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆಯ ಮಹಾನಿರ್ದೇಶಕರು ಡಾ.ಪಿ.ಚಂದ್ರಶೇಖರ್, ಶಾಸಕರಾದ ನರೇಂದ್ರ ಸ್ವಾಮಿ, ಶರತ್ ಬಚ್ಚೆಗೌಡ, ಕೃಷಿ ವಿವಿ ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಾಟೀಲ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ್, ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಟಿ. ಕೆ ಪ್ರಭಾಕರ್ ಶೆಟ್ಟಿ, ಉಲ್ಲಾಸ್, ಚಂದ್ರೆಗೌಡ, ರಾಘವೇಂದ್ರ, ಹಾಗು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಸವೇಗೌಡ ಭಾಗವಹಿಸಿದ್ದರು.