ಸುದ್ದಿಮೂಲ ವಾರ್ತೆ
ಹುಬ್ಬಳ್ಳಿ, ಆ.18: ಡೇಟಾ ಮತ್ತು ಕೃತಕ ಬುದ್ಧಿಮತ್ತೆ (ಎಐ)ಸೇವೆಗಳ ಪ್ರಮುಖ ಪೂರೈಕೆದಾರ ಸಂಸ್ಥೆಯಾದ ‘ಥರ್ಡ್ ಐ ಡೇಟಾ’ ಸಂಸ್ಥೆಯು ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಕ್ಲಸ್ಟರ್ನಲ್ಲಿ ಶುಕ್ರವಾರ ತನ್ನ ಮೊದಲ ಕೇಂದ್ರ ಸ್ಥಾಪಿಸಿದೆ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನ (ಕೆಡಿಇಎಂ) ಬಿಯಾಂಡ್ ಬೆಂಗಳೂರು ಉಪಕ್ರಮದ ಪ್ರಮುಖ ಭಾಗವಾಗಿ ಅಭಿವೃದ್ಧಿಪಡಿಸಿರುವ ಹೆಚ್ಡಿಬಿ ಕ್ಲಸ್ಟರ್ ಇನ್ನು ಮುಂದೆ ಜಾಗತಿಕ ಮಟ್ಟದ ಪ್ರಮುಖ ಎಐ ಸೇವಾ ಪೂರೈಕೆದಾರರ ಕೇಂದ್ರವಾಗಿ ಹೊರಹೊಮ್ಮುಲಿದೆ.
ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು, ವೃತ್ತಿಪರರಿರುವ ಹೆಚ್ಡಿಬಿ ಕ್ಲಸ್ಟರ್ನಲ್ಲಿ ಹೊಸ ಎಐ ಕೇಂದ್ರದ ಸ್ಥಾಪನೆಯಿಂದ ಡೇಟಾ ಮತ್ತು ಎಐ ಉದ್ಯಮದಲ್ಲಿ ಈ ಕ್ಲಸ್ಟರ್ ಬೆಂಗಳೂರನ್ನು ಸರಿಗಟ್ಟುವ ರೀತಿಯಲ್ಲಿ ಅಭಿವೃದ್ಧಿ ಕಾಣುವ ಭರವಸೆ ಮೂಡಿಸಿದೆ.
ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಥರ್ಡ್ ಐ ಡೇಟಾ’ದ ಹುಬ್ಬಳ್ಳಿ ಕಚೇರಿಯು, ಡಾಟಾ ಸೈನ್ಸಸ್ ಮತ್ತು ಡೇಟಾ ಎಂಜಿನಿಯರಿಂಗ್ ಕ್ಷೇತ್ರದ ಅನುಭವಿಗಳನ್ನು ನೇಮಿಸಿಕೊಳ್ಳಲಿದೆ. ಜತೆಗೆ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಹಿನ್ನೆಲೆ ಹೊಂದಿರುವ ಹೊಸ ಪದವೀಧರರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಿದೆ. ಪೂರಕವಾಗಿ, ಕಂಪನಿಯು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ಗಳನ್ನು ಆಯೋಜಿಸಿ, ನಂತರ ಅರ್ಹರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಿದೆ.
‘ಥರ್ಡ್ ಐ ಡೇಟಾ’ ಸಂಸ್ಥೆಯು ಡೇಟಾ ಸೈನ್ಸಸ್ ಮತ್ತು ಇಂಜಿನಿಯರಿಂಗ್ ಕೋರ್ಸುಗಳ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಕಾರ್ಯಾಗಾರ, ವೆಬಿನಾರ್ಗಳು ಮತ್ತು ಸಮಾಲೋಚನಾ ಸಭೆಗಳನ್ನು ಆಯೋಜಿಸಲಿದೆ.ಕೆಇಡಿಎಂ ಸಹಯೋಗದೊಂದಿಗೆ ಹುಬ್ಬಳ್ಳಿಗೆ ಕಾಲಿರಿಸಿರುವ ಥರ್ಡ್ ಐ ಸಂಸ್ಥೆಯು, ವಿಶ್ವವಿದ್ಯಾನಿಲಯಗಳು ಮತ್ತು ವೃತ್ತಿಪರರಿಗೆ ಪೂರಕ ಪರಿಸರ ವ್ಯವಸ್ಥೆಯನ್ನು ರೂಪಿಸಲಿದೆ.
ಈ ಕುರಿತಂತೆ ‘ಥರ್ಡ್ ಐ ಡೇಟಾ’ದ ಸಂಸ್ಥಾಪಕ ಸಿಇಒ ಡಿ.ಜೆ.ದಾಸ್ ಮಾತನಾಡಿ, ‘ನಮ್ಮ ಯೋಜನೆಗಳು ಶೈಕ್ಷಣಿಕ-ಉದ್ಯಮ ಸಹಯೋಗ ಮತ್ತು ಸರ್ಕಾರಿ ನೀತಿಗಳಿಂದ ಬೆಂಬಲಿತವಾಗಿದ್ದು, ಸ್ಥಳೀಯ ಪ್ರತಿಭೆಗಳಿಗೆ ಔದ್ಯೋಗಿಕ ವಾತಾವರಣ ರೂಪಿಸುತ್ತವೆ. ಮುಂಬರುವ ದಿನಗಳಲ್ಲಿ 100ಕ್ಕೂ ಹೆಚ್ಚು ವೃತ್ತಿಪರರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗುವುದು’ ಎಂದು ಹೇಳಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನ ಸಿಇಒ ಸಂಜೀವ್ ಗುಪ್ತಾ ಮಾತನಾಡಿ, ‘ಹುಬ್ಬಳ್ಳಿಯಲ್ಲಿ ‘ಥರ್ಡ್ ಐ ಡೇಟಾ’ ಸಂಸ್ಥೆಯ ವಿಸ್ತರಣೆ ಬಗ್ಗೆ ಸಂತಸವಾಗಿದೆ. ಇಲ್ಲಿನ ಟೆಕ್ ಕ್ಲಸ್ಟರ್ನಲ್ಲಿ ತಮ್ಮ ಮೊದಲ ಕಚೇರಿ ಆರಂಭಿಸುತ್ತಿರುವ ಸಂಸ್ಥೆಗೆ ಅಭಿನಂದನೆ ಸಲ್ಲಿಸಿತ್ತೇನೆ. ಉದಯೋನ್ಮುಖ ‘ಕೃತಕ ಬುದ್ಧಿಮತ್ತೆ’ ಕೇಂದ್ರವಾಗಿರುವ ಹೆಚ್ಡಿಬಿ ಕ್ಲಸ್ಟರ್ ಈ ವಲಯದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಳ್ಳಲಿದೆ. ಅಲ್ಲದೇ, ಪ್ರತಿಭೆಗಳ ಪೂರೈಕೆ ಮತ್ತು ಪೂರಕ ಪರಿಸರ ವ್ಯವಸ್ಥೆಯಿಂದಾಗಿ ಜಾಗತಿಕ ‘ಎಐ’ ಹಬ್ ಆಗಿ ಹೊರಹೊಮ್ಮುವ ಭರವಸೆಯಿದೆ,” ಎಂದರು.
ಥರ್ಡ್ಐ ಡೇಟಾ ಬಗ್ಗೆ:
ಸಿಲಿಕಾನ್ ವ್ಯಾಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ, ‘ಥರ್ಡ್ ಐ ಡೇಟಾ’ ಸಂಸ್ಥೆಯು ಕೋಲ್ಕತ್ತಾದಲ್ಲಿ ಕಚೇರಿ ಹೊಂದಿದೆ. ಈಗ ಹುಬ್ಬಳ್ಳಿಯಲ್ಲಿ ತನ್ನ ಕೇಂದ್ರ ವಿಸ್ತರಿಸಿದೆ. ಡೇಟಾ-ಚಾಲಿತ ಜಗತ್ತಿನಲ್ಲಿ, ಥರ್ಡ್ಐ ಡೇಟಾವು ಉನ್ನತ-ಶ್ರೇಣಿಯ ಡೇಟಾ ಮತ್ತು ಎಐ ಸೇವೆಗಳನ್ನು ಒದಗಿಸುತ್ತದೆ. ನುರಿತ ಡೇಟಾ ವೃತ್ತಿಪರರು ಮತ್ತು ಡೇಟಾ-ಕೇಂದ್ರಿತ ಸದೃಢವಾದ ಪರಿಸರ ವ್ಯವಸ್ಥೆಯನ್ನು ಬೆಳೆಸಲು ಬದ್ಧವಾಗಿದೆ. ಡೇಟಾ ಮತ್ತು ಎಐ ಸೇವೆಗಳ ಮೂಲಕ ಉದ್ಯಮಗಳಾದ್ಯಂತ ಜಾಗತಿಕ ರೂಪಾಂತರವನ್ನು ಸಾಧಿಸಿದೆ.