ಸುದ್ದಿಮೂಲ ವಾರ್ತೆ
ಬೆಂಗಳೂರು: ಕಾಂಗ್ರೆಸ್ ಟಿಕೆಟ್ ವಂಚಿತ, ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದರು.
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಾದ್ಯಂತ ಬೃಹತ್ ಮೆರವಣಿಗೆ ನಡೆಸಿದರು. ವಿವಿಧ ವಾದ್ಯಗಳೊಂದಿಗೆ ಜನರು ಕುಣಿಯುತ್ತಾ, ನಲಿಯುತ್ತಾ ಅಖಂಡ ಅವರ ಜೊತೆ ಹೆಜ್ಜೆ ಹಾಕಿದರು.
ಮುಂದಿನ ಎಂಎಲ್ಎ ಅಖಂಡ ಶ್ರೀನಿವಾಸ ಮೂರ್ತಿ, ಅಖಂಡ ಅವರಿಗೆ ಜಯ ನಿಶ್ಚಿತ ಎಂಬ ಘೋಷಣೆಗಳನ್ನು ಕೂಗಿದರು. ಅಖಂಡ ಶ್ರೀನಿವಾಸ್ ಅವರ ಭಾವಚಿತ್ರ ಹಿಡಿದು ಮೆರವಣಿಗೆಯಲ್ಲಿ ಸಾಗಿ ಬಂದರು. ಈ ವೇಳೆ ಕ್ಷೇತ್ರದ ಕಾರ್ಯಕರ್ತರು ಸೇರಿ ಜೆಸಿಬಿ ಮೂಲಕ ಬೃಹತ್ ಸೇಬಿನ ಹಾರ ಹಾಕಲಾಯಿತು.
ಬಳಿಕ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿರುವ ಫ್ರೇಜರ್ಟೌನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಅವರು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದರು.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ 81 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೆ. ಇಷ್ಟು ಮತಗಳ ಅಂತರದಿಂದ ಗೆದ್ದ ಕರ್ನಾಟಕದ ಮೊದಲ ಶಾಸಕ ನಾನು. ಈ ಬಾರಿ ಅದಕ್ಕಿಂತಲೂ 10 ಸಾವಿರ ಮತಗಳ ಹೆಚ್ಚು ಅಂತರದಿಂದ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ವಿಧಾನಸೌಧಕ್ಕೆ ಕೇವಲ 4 ಕಿ.ಮೀ. ಅಂತರದಲ್ಲಿರುವ ನನ್ನ ಕ್ಷೇತ್ರದಲ್ಲಿ ಈ ಬಾರಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ನನಗೆ ಕ್ಷೇತ್ರ ಜನರ, ಕಾರ್ಯಕರ್ತರ, ಎಲ್ಲ ಮುಖಂಡರ ಬೆಂಬಲ ಮತ್ತು ಆಶೀರ್ವಾದ ಇದೆ. ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅಲ್ಲದೆ, ನನ್ನ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಲ್ಲರೂ ಅಣ್ಣ ತಮ್ಮಂದಿರಂತೆ ಇದ್ದೇವೆ. ಕ್ಷೇತ್ರದ ಹೊರಗಿನವರ ಅಭಿಪ್ರಾಯಗಳಿಂದ ಯಾವುದೇ ಗೊಂದಲಕ್ಕೆ ಒಳಲಾಗುವುದಿಲ್ಲ. ಎಲ್ಲ ಸಮುದಾಯದವರ ಬೆಂಬಲವೂ ನನಗೆ ಇದೆ. ಅವರ ಅಶೀರ್ವಾದದಿಂದ ಗೆಲುವು ನಿಶ್ಚಿತ ಎಂದು ಅಖಂಡ ಶ್ರೀನಿವಾಸಮೂರ್ತಿ ತಿಳಿಸಿದರು.
ನಿಮಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದು ಏಕೆ? ಎಂಬ ಪ್ರಶ್ನೆಗೆ, ನನಗೆ ಯಾರು ಟಿಕೆಟ್ ತಪ್ಪಿಸಿದರೋ ಅವರನ್ನೇ ಹೋಗಿ ಕೇಳುವುದು ಒಳ್ಳೆಯದು ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಬಳಿಕ ಅವರು ಕ್ಷೇತ್ರದ ವಿವಿಧ ದೇವಸ್ಥಾನ, ದರ್ಗಾ ಮತ್ತು ಚರ್ಚ್ಗಳಿಗೆ ಭೇಟಿ ನೀಡಿ ಎಲ್ಲಾ ಧರ್ಮಗುರುಗಳ ಆಶೀರ್ವಾದ ಪಡೆದರು.