ಸುದ್ದಿಮೂಲ ವಾರ್ತೆ
ಹೊಸಕೋಟೆ ನ.07 : ಅಂಬೇಡ್ಕರ್ ಪ್ರತಿಮೆ ಇರುವ ದಲಿತರ ಕಾಲೋನಿಗಳಿಗೆ ಬೀಟ್ ಪೊಲೀಸರ ಗಸ್ತು ಹೆಚ್ಚಿಸಬೇಕು, ಯಾವುದೇ ದೌರ್ಜನ್ಯ ನಡೆಯದಂತೆ ನಿಗಾ ವಹಿಸಬೇಕು. ಕುಂದು ಕೊರತೆ ಸಭೆ ಗ್ರಾಪಂ. ಮಟ್ಟದಲ್ಲಿ ಅಯೋಜಿಸಿ,ದಲಿತರು ನೆಮ್ಮದಿಯಾಗಿ ಬದುಕನ್ನು ಸಾಗಿಸುವಂತಹ ವಾತಾವರಣ ಕಲ್ಪಿಸಬೇಕು ಎಂದು ಭಾರತೀಯ ಅಂಬೇಡ್ಕರ್ ಸೇನೆ ಸ್ವಾಭಿಮಾನದ ರಾಜ್ಯಾಧ್ಯಕ್ಷ ಡಾ.ಶಿವಕುಮಾರ್ ಚಕ್ರವರ್ತಿ ತಿಳಿಸಿದರು.
ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ಆವರಣದಲ್ಲಿ ಹೊಸಕೋಟೆ ಪೊಲೀಸ್ ಉಪ ವಿಭಾಗದ ಸಹಯೋಗದಲ್ಲಿ ನಡೆದ ದಲಿತರ ಕುಂದು ಕೊರತೆಗಳ ಸಭೆಯನ್ನು ಕುರಿತು ಮಾತನಾಡಿದರು.
ಬಂಡಹಳ್ಳಿಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡದಂತೆ ಕ್ರಮ ಜರುಗಿಸಬೇಕು. ದಲಿತರ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ರವಾನಿಸಿ, ಸಮಸ್ಯೆ ಬಗೆಹರಿಸಲು ಪೊಲೀಸ್ ಇಲಾಖೆ ಮುಂದಾಗಬೇಕು. ದಲಿತರ ಮೇಲೆ ದೌರ್ಜನ್ಯ ನಿಂತಿಲ್ಲ.
ಜಾತೀಯತೆ ನಿರ್ಮೂಲನೆ ಆಗದ ಹೊರತು ಸ್ವಾಸ್ಥ್ಯ ಸಮಾಜ ನಿರ್ಮಾಣ ಅಸಾಧ್ಯ ಎಂದು ಹೇಳಿದರು.
ವೃತ್ತ ನಿರೀಕ್ಷಕ ದಿವಾಕರ್ ಮಾತನಾಡಿ, ಅಕ್ರಮ ಗಣಿಗಾರಿಕೆಯ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲಾಗುವುದು. ದಲಿತ ಸಮುದಾಯ ವಾಸಿಸುವ ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಅಬಕಾರಿ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಕಾಲೋನಿಗೆ ಪೊಲೀಸರ ಗಸ್ತು ಹೆಚ್ಚಿಸಲಾಗುವುದು. ಕುಂದು ಕೊರತೆಗಳ ಸಭೆ ನಡೆಸಲು ಕ್ರಮ ವಹಿಸಲಾಗುವುದು ಎಂದರು.
ದಲಿತರ ಮೇಲೆ ಯಾರೇ ದೌರ್ಜನ್ಯ ಎಸಗಿದರೂ ಸೂಕ್ತ ಕ್ರಮ ಜರುಗಿಸಲಾಗುವುದು. ಯಾವುದೇ ಮುಲಾಜಿಗೆ ಒಳಗಾಗದೆ ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ. ದಲಿತರಿಗೆ ಸೂಕ್ತ ರಕ್ಷಣೆ ಒದಗಿಸಲು ಪೊಲೀಸ್ ಇಲಾಖೆ ಬದ್ದವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಸೀಮಿತ ಜಾತಿಗೆ ಮಾತ್ರ ಸಂವಿಧಾನ ರಚಿಸಿಲ್ಲ. ಇದರಲ್ಲಿ ಶೋಷಿತರು, ಹಿಂದುಳಿದವರು ಎಂಬ ಯಾವುದೇ ಭೇದವಿಲ್ಲದಂತೆ ಸರ್ವರಿಗೂ ಸಮಾನವಾದ ಹಕ್ಕನ್ನು ನೀಡಿದ್ದಾರೆ. ಕಾನೂನಡಿ ಎಲ್ಲರೂ ಸಮಾನರು ಎಂದರು.
ಈ ಸಂದರ್ಭದಲ್ಲಿ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ದಲಿತ ಸಮುದಾಯದ ಮುಖಂಡರು ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.