ಸುದ್ದಿಮೂಲ ವಾರ್ತೆ
ಮೈಸೂರು, ನ. 25: ಜಿಲ್ಲೆಯ ನಂಜನಗೂಡು ತಾಲೂಕು ಸುತ್ತೂರು ಶ್ರೀ ಕ್ಷೇತ್ರದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವವನ್ನು ಸುತ್ತೂರು ಕ್ಷೇತ್ರದಲ್ಲಿ ಫೆ.6 ರಿಂದ 11ರವರೆಗೆ ಆರು ದಿನಗಳ ಕಾಲ ಸಡಗರ ಸಂಭ್ರಮದಿಂದ ನಡೆಯಲಿದೆ.
ಮೈಸೂರು ಶ್ರೀಮಠದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಜಾತ್ರೆ ಆಚರಣೆಯ ದಿನಾಂಕ ನಿಗದಿಪಡಿಸಲಾಗಿದೆ. ಫೆ. 6ರಿಂದ ಆರಂಭವಾಗುವ ಜಾತ್ರಾ ಮಹೋತ್ಸವದಲ್ಲಿ ನಾನಾ ಕಾರ್ಯಕ್ರಮಗಳು ನಡೆಯಲಿದೆ. ಸುತ್ತೂರಿನ ಶ್ರೀಮಠದಿಂದ ಆದಿಜಗದ್ಗುರು ಶಿವಯೋಗಿಗಳ ಉತ್ಸವ ಮೂರ್ತಿಯನ್ನು ಕರ್ತೃ ಗದ್ದುಗೆಗೆ ತರುವುದರೊಂದಿಗೆ ಜಾತ್ರೆ ಆರಂಭಗೊಳ್ಳಲಿದೆ.
ಫೆ.7ರಂದು ಉಚಿತ ಸಾಮೂಹಿಕ ವಿವಾಹ, 8ರಂದು ರಥೋತ್ಸವ, 9ರಂದು ಶ್ರೀ ಮಹದೇಶ್ವರ ಕೊಂಡೋತ್ಸವ, 10ರಂದು ತೆಪ್ಪೋತ್ಸವ ನಡೆಯಲಿದ್ದು, ಫೆ.11ರಂದು ಜಾತ್ರೆಗೆ ತೆರೆಬೀಳಲಿದೆ. ಇದೇ ವೇಳೆ ಕರ್ತೃಗದ್ದುಗೆ, ಮಹದೇಶ್ವರ, ವೀರಭದ್ರೇಶ್ವರದೇವಸ್ಥಾನ ಮುಂತಾದ ಕಡೆಗಳಲ್ಲಿ ವಿಶೇಷ ಪೂಜಾಕೈಂಕರ್ಯಗಳು ನಡೆಯಲಿವೆ. ಕಪಿಲ ನದಿ ದಡದಲ್ಲಿ ನೆಲೆನಿಂತಿರುವ ಸುತ್ತೂರು ಕ್ಷೇತ್ರದಲ್ಲಿ ನಡೆಯುವ ಜಾತ್ರೆ ಒಂದು ದಿನದಲ್ಲಿ ಮುಗಿದು ಹೋಗುವ ಜಾತ್ರೆಯಲ್ಲ.
ಸುಮಾರು ಆರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಆರೋಗ್ಯ ಮೇಳ, ಕೃಷಿ ಮೇಳ, ಉತ್ಪಾದಕ ಮತ್ತು ಗ್ರಾಹಕ ಮೇಳ, ಕ್ರೀಡಾ ಮೇಳ, ಸಾಂಸ್ಕೃತಿಕ ಮೇಳ, ಶೈಕ್ಷಣಿಕ ಮೇಳ, ಸಾಹಿತ್ಯ ಮತ್ತು ಪುಸ್ತಕ ಮೇಳ, ಸರ್ವಧರ್ಮ ಸಮ್ಮಿಲನ, ಸಾಮೂಹಿಕ ವಿವಾಹ, ವಿವಿಧ ವಸ್ತು ಪ್ರದರ್ಶನಗಳು, ದನಗಳ ಜಾತ್ರೆ, ಜಾನಪದ ಜಾತ್ರೆ, ಕುಸ್ತಿ ಪಂದ್ಯಾವಳಿ, ನಗೆ ಉತ್ಸವ, ನಾಟಕ, ನೃತ್ಯ, ವಚನಗಾಯನ, ಸುಗಮ ಸಂಗೀತ, ಯಕ್ಷಗಾನ. ಹೀಗೆ ಎಲ್ಲಾ ರೀತಿಯ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ.
ಈಗಿನಿಂದಲೇ ಸಿದ್ದತೆ ಆರಂಭ
1986 ರಿಂದ 24ನೇ ಪೀಠಾಧಿಕಾರಿಗಳಾಗಿರುವ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಹಿರಿಯ ಜಗದ್ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಾ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಾ ಸಾಗುತ್ತಿದೆ. ಈ ಬಾರಿ ಸುತ್ತೂರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆಯಿರುವುದರಿಂದ ಈಗಿನಿಂದಲೇ ಸಿದ್ಧತೆಯನ್ನು ಆರಂಭಿಸಲಾಗಿದೆ.
ಇನ್ನು ಸುತ್ತೂರು ಕ್ಷೇತ್ರದ ಬಗ್ಗೆ ಹೇಳಬೇಕೆಂದರೆ ಇಲ್ಲಿನ ಶ್ರೀ ಮಠಕ್ಕೆ ಸುಮಾರು ಹತ್ತು ಶತಮಾನಗಳ ಗತ ಇತಿಹಾಸವಿರುವುದನ್ನು ನಾವು ಕಾಣಬಹುದು. ಈ ಕ್ಷೇತ್ರ ಶಾಂತಿ, ಸಂಯಮ, ಸಹಬಾಳ್ವೆಯನ್ನು ನಾಡಿಗೆ ಸಾರಿದ ಕ್ಷೇತ್ರವೂ ಇದಾಗಿದೆ.