ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.28: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಸುಮಾರ 11 ಸಾವಿರ ಎಕರೆ ಜಾಗಗಳ ವ್ಯಾಜ್ಯ ವಿಲೇವಾರಿಗೆ ನ್ಯಾಯಾಲಯದಿಂದಲೇ ಅದಾಲತ್ ನಡೆಸುವಂತೆ ಬಿಡಿಎ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್, ವಿವಿಧ ಬಡಾವಣೆಗಳ ನಿರ್ಮಾಣಕ್ಕಾಗಿ ಬಿಡಿಎ ಕಾಲಕಾಲಕ್ಕೆ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಭೂ ಪರಿಹಾರ ಕಡಿಮೆ ಆಗಿದೆ ಎಂಬುದು ಸೇರಿದಂತೆ ಹಲವು ಕಾರಣಗಳಿಂದ ಭೂಮಾಲೀಕರು ಬಿಡಿಎ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ದಾವೆ ಹೂಡಿದ್ದಾರೆ. ಕೆಲವು ಪ್ರಕರಣಗಳು 30-40 ವರ್ಷಗಳಾದರೂ ಇತ್ಯರ್ಥವಾಗದೇ ಉಳಿದಿವೆ ಎಂದರು.
ಇದರಿಂದ ಭೂಸ್ವಾಧೀನ ಪ್ರಕ್ರಿಯೆಗೆ ಹಿನ್ನಡೆ ಮತ್ತು ಭೂಮಾಲೀಕರಿಗೆ ಪರಿಹಾರ ಸಿಗುವಲ್ಲಿ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಮತ್ತು ಭೂಮಾಲೀಕರಿಗೆ ಅನುಕೂಲವಾಗುವ ರೀತಿಯಲ್ಲಿ ಬಾಕಿ ಉಳಿದಿರುವ ಸುಮಾರು 11 ಸಾವಿರ ಎಕರೆ ಭೂ ವ್ಯಾಜ್ಯಗಳನ್ನು ವಿಶೇಷ ಅದಾಲತ್ತುಗಳನ್ನು ನ್ಯಾಯಾಲಯದಿಂದಲೇ ನಡೆಸಿ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗೆ ಇತ್ಯರ್ಥವಾಗುವ ಪ್ರಕರಣಗಳಿಂದ ಬಿಡಿಎಗೆ ಆದಾಯ ಬರಲಿದೆ ಎಂದು ತಿಳಿಸಿದರು.
ಬಿಡಿಎ ಅಧ್ಯಕ್ಷರಾಗಿ ಎರಡು ವರ್ಷ ನಾಲ್ಕು ತಿಂಗಳ ಅಧಿಕಾರಾವಧಿಯಲ್ಲಿ ಸಂಸ್ಥೆಯ ಬೆಳವಣಿಗೆಗೆ ಪೂರಕವಾದ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇನೆ. ಅಧಿಕಾರ ವಹಿಸಿಕೊಂಡ ತಕ್ಷಣ ಕೆಲವರ ವಿರೋಧದ ನಡುವೆಯೇ ಮಧ್ಯವರ್ತಿಗಳು ಮತ್ತು ಏಜೆಂಟರ ಹಾವಳಿಗೆ ಕಡಿವಾಣ ಹಾಕುವ ಕೆಲಸ ಮಾಡಿದ್ದೇನೆ. ಇದರ ಜೊತೆಗೆ ಏಜೆಂಟರ ಜೊತೆಗೆ ಶಾಮೀಲಾಗಿ ಸಂಸ್ಥೆಗೆ ನಷ್ಟ ಮಾಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ರೈತರ ಜಾಗದಲ್ಲಿ ನಿವೇಶನ
ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡುವ ರೈತರಿಗೆ ಅವರದೇ ಜಮೀನಿನಲ್ಲಿ ಶೇ.40ರಂತೆ ಪರಿಹಾರಾರ್ಥ ನಿವೇಶನದ ಜಾಗವನ್ನು ಮೀಸಲಿಡಲಾಗುವುದು. ರೈತರು ತಮ್ಮದಾಗಿಸಿಕೊಳ್ಳಲು ಒಂದು ವರ್ಷ ಕಾಲಾವಕಾಶ ನೀಡಲಾಗುವುದು. ಈ ಸಂಬಂಧ ಹಂಚಿಕೆಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದು ತಿಳಿಸಿದರು.
ಬಿಡಿಎ ವ್ಯಾಪ್ತಿಯ ಲೇಔಟ್ಗಳಲ್ಲಿ 2020 ರ ಡಿಸೆಂಬರ್ 1 ರಿಂದ ಇಲ್ಲಿಯವರೆಗೆ 2 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಬಿಡಿಎ ಆಸ್ತಿಯನ್ನು ಭೂಕಬಳಿಕೆದಾರರಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ.
3553 ಕೋಟಿ ರೂ. ಆದಾಯಕಳೆದ ಎರಡು ವರ್ಷಗಳಲ್ಲಿ ಬಿಡಿಎಯಿಂದ ವಿವಿದ ಬಡಾವಣೆಗಳಲ್ಲಿ ಒಟ್ಟು 3735 ನಿವೇಶನಗಳನ್ನು ಹರಾಜು ಮೂಲಕ ಸಾರ್ವಜನಿಕರಿಗೆ ಹಂಚಿಕೆ ಮಾಡಿದ್ದು ಇದರಿಂದ ಪ್ರಾಧಿಕಾರದ ಬೊಕ್ಕಸಕ್ಕೆ 3553 ಕೋಟಿ ರೂ. ಆದಾಯ ಬಂದಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಡಿಎ ಅಭಿಯಂತರ ಸದಸ್ಯ ಶಾಂತರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.