ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ. 21: ಉದ್ದೇಶಿತ ಡಾ.ಕೆ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿರುವ ರೈತರಿಗೆ ಆದ್ಯತೆ ಮೇಲೆ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ಕಾರಂತ ಬಡಾವಣೆಗೆ ಭೂಮಿ ನೀಡಿರುವ ವಿವಿಧ ಗ್ರಾಮಗಳ 50 ಕ್ಕೂ ಹೆಚ್ಚು ರೈತರೊಂದಿಗೆ ಸಭೆ ನಡೆಸಿದ ವಿಶ್ವನಾಥ್, ಬಡಾವಣೆ ರಚನೆ ಸಂಬಂಧ ಹಿಂದಿನ ಸರ್ಕಾರಗಳು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪುಗಳನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದ್ದವು. ಇದೀಗ ಆ ನಿರ್ಧಾರಗಳಂತೆ ಬಡಾವಣೆ ನಿರ್ಮಾಣವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ರೈತರು ತಾವು ನೀಡಿರುವ ಜಮೀನಿನಲ್ಲೇ ಪ್ರೋತ್ಸಾಹಕರ ನಿವೇಶನವನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ರೈತರು ತಮ್ಮ ಭೂಮಿಯನ್ನು ಬಡಾವಣೆ ನಿರ್ಮಾಣಕ್ಕಾಗಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಬಿಡಿಎ ಆದಷ್ಟೂ ರೈತರ ಜಮೀನಿನಲ್ಲಿಯೇ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಹಂಚಿಕೆ ಮಾಡಲಿದೆ. ಒಂದು ವೇಳೆ, ಕೆಲವು ರೈತರ ಜಾಗದಲ್ಲಿ ಸಿಎ ನಿವೇಶನ, ಉದ್ಯಾನವನ ಸೇರಿದಂತೆ ಸಾರ್ವಜನಿಕ ಉಪಯೋಗಿ ನಿವೇಶನವೆಂದು ನಿಗದಿಪಡಿಸಿದರೆ ಪಕ್ಕದ ಸರ್ವೇ ನಂಬರಿನಲ್ಲಿನ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ರೈತರಿಗೆ ಆದ್ಯತೆ ಮೇಲೆ ನಿವೇಶನ
ಬಡಾವಣೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಆದ್ಯತೆ ಮೇಲೆ ಮೊದಲ ಹಂತದಲ್ಲಿ ರೈತರಿಗೆ ನಿವೇಶನಗಳನ್ನು ಹಂಚಿಕೆ ಮಾಡಿ, ನಂತರ ಎರಡನೇ ಹಂತದಲ್ಲಿ ಸಾರ್ವಜನಿಕರಿಗೆ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಶಾಸಕರು ತಿಳಿಸಿದರು.
ಡಾ.ಕೆ.ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಸಂಪೂರ್ಣ ಹೊಣೆಗಾರಿಕೆ ಸುಪ್ರೀಂಕೋರ್ಟಿನ ನಿರ್ದೇಶನದನ್ವಯ ನಡೆಯುತ್ತಿದೆ. ನ್ಯಾಯಾಲಯ ನೀಡಿರುವ ಮಾರ್ಗಸೂಚಿಗಳನ್ವಯ ಅಧಿಕಾರಿಗಳು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಬಿಡಿಎ ಅಧಿಕಾರಿಗಳು ತಮ್ಮದೇ ಆದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತರಿಗೆ ಅಭಿವೃದ್ಧಿಪಡಿಸಿದ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಯಾವ ಸ್ವರೂಪದಲ್ಲಿ ಇರಬೇಕು ಎಂಬುದರ ಬಗ್ಗೆ ಅಧಿಕಾರಿಗಳು ರೂಪುರೇಶೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಈ ಪ್ರಕ್ರಿಯೆ ರೈತರ ಹಿತ ಕಾಯುವಂತಿರುತ್ತದೆ. ಸದ್ಯದಲ್ಲೇ ರೂಪುರೇಶೆ ಅಂತಿಮವಾಗಲಿದ್ದು, ಅದರನ್ವಯ ನಿವೇಶನಗಳ ಹಂಚಿಕೆ ಮತ್ತು ಪರಿಹಾರ ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಭರವಸೆ ನೀಡಿದರು.
ಬಿಡಿಎ ಆಯುಕ್ತ ಜಿ.ಕುಮಾರನಾಯಕ್ ಅವರು ಮಾತನಾಡಿ, ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆಂದು ಭೂಮಿ ನೀಡಿರುವ ರೈತರ ಹಿತವನ್ನು ಕಾಯಲು ಬಿಡಿಎ ಬದ್ಧವಾಗಿದೆ ಎಂದರು.
ಸಭೆಯಲ್ಲಿ ಬಿಡಿಎ ಕಾರ್ಯದರ್ಶಿ ಶಾಂತರಾಜು, ವಿಶೇಷ ಭೂಸ್ವಾಧೀನಾಧಿಕಾರಿ ಡಾ.ಸೌಜನ್ಯ ಸೇರಿದಂತೆ ಇನ್ನಿತರೆ ಹಿರಿಯ ಅಧಿಕಾರಿಗಳು ಇದ್ದರು.