ಸುದ್ದಿಮೂಲ ವಾರ್ತೆ
ಕೆಜಿಎಫ್ ಮಾ.31: ಕೆಜಿಫ್ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ 95,504 ಪುರುಷರು ಮತ್ತು 96246 ಮಹಿಳೆಯರು ಸೇರಿ ಒಟ್ಟಾರೆ 191750 ಮತದಾರರಿದ್ದು, ಪಟ್ಟಣ ಪ್ರದೇಶದಲ್ಲಿ 115 ಮತ್ತು ಗ್ರಾಮೀಣ ಪ್ರದೇಶದಲ್ಲಿ 117 ಮತಗಟ್ಟೆಗಳು ಸೇರಿದಂತೆ ಒಟ್ಟಾರೆ 232 ಮತಗಟ್ಟೆಗಳಿದ್ದು, ಇಂದಿನಿಂದ ಚುನಾವಣೆ ಮುಗಿಯುವವರೆಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಎಂ.ಡಿ.ಅತೀಕ್ ಉಲ್ಲಾ ಶರೀಫ್ ಹೇಳಿದರು.
ನಗರದ ತಾಲ್ಲೂಕು ಆಡಳಿತ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ 80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಮತ್ತು ವಿಶೇಷ
ಚೇತನರು ಹಾಗೂ ಕೋವಿಡ್ ಸೋಂಕಿತರಿಗೆ ಮನೆಗಳಿಂದಲೇ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.
ತಾಲ್ಲೂಕಿನಾದ್ಯಂತ 4369 ಮಂದಿ 80 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಹಿರಿಯ ನಾಗರೀಕರು ಮತ್ತು 2215 ಮಂದಿ ವಿಶೇಷಚೇತನ ಮತದಾರರನ್ನು ಪಟ್ಟಿ ಮಾಡಿದ್ದು, ಇವರು ಪ್ರಯಾಸದಿಂದ ಮತಗಟ್ಟೆಗೆ ಬಂದು ಚಲಾಯಿಸದೇ ತಾವಿರುವ ಸ್ಥಳದಲ್ಲೇ ಪೋಸ್ಟಲ್ ಮುಖಾಂತರ ಮತ ಚಲಾಯಿಸಬಹುದಾಗಿದೆ ಎಂದರು.
ತಾಲ್ಲೂಕಿನಾದ್ಯಂತ 232 ಮತಗಟ್ಟೆಗಳಲ್ಲಿ 173 ಸಾಮಾನ್ಯ ಮತ್ತು 59 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ತಾಲ್ಲೂಕಿನ ನಲ್ಲಗುಟ್ಟೂರು, ಕೆಂಪಾಪುರ, ವೆಂಕಟಾಪುರ ಮತ್ತು ಜೆಕೆ ಪುರ
ಸೇರಿದಂತೆ ನಾಲ್ಕು ಕಡೆಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. 3 ಫ್ಲೈಯಿಂಗ್ ಸ್ಕವಾಡ್ ತಂಡಗಳನ್ನು ರಚಿಸಲಾಗಿದ್ದು, 20 ಸೆಕ್ಟರ್ ಆಫೀಸರ್ಗಳು ಕಾರ್ಯನಿರ್ವಹಿಸಲಿದ್ದಾರೆ.
ನೂತನ ಮತದಾರರಾಗಿ ಸೇರ್ಪಡೆಯಾಗಲಿರುವವರು ಏಪ್ರಿಲ್ 11ನೇ ತಾರೀಖಿನೊಳಗೆ ಮತದಾರ ಪಟ್ಟಿಗೆ ನೊಂದಣಿ ಮಾಡಿಕೊಳ್ಳಲು ಅವಕಾಶ ಒದಗಿಸಲಾಗಿದ್ದು, ಇದುವರೆಗೆ ನೊಂದಣಿಯಾಗದೇ ಉಳಿದಿರುವವರು
ಕೂಡಲೇ ಮತದಾರ ಪಟ್ಟಿಗೆ ನೊಂದಾಯಿಸಿಕೊಳ್ಳುವವಂತೆ ಮನವಿ ಮಾಡಿದರು.
ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ದಾಖಲಿಸಲು ಸಿ ವಿಜಿಲ್ ಮತ್ತು ಸಮಾಧಾನ್ ಆಪ್ಗಳನ್ನು ಪರಿಚಯಿಸಲಾಗಿದೆ. ರಾಜಕೀಯ ಪಕ್ಷಗಳು ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಸುವಿಧಾ ಎಂಬ ಆಪ್ನ್ನು ಪರಿಚಯಿಸಲಾಗಿದ್ದು, ಈ ಆಪ್ನ ಮೂಲಕ ಸಂಬಂಧಪಟ್ಟ ಇಲಾಖೆಗಳ ವತಿಯಿಂದ ಅನುಮತಿಯನ್ನು ಪಡೆದುಕೊಳ್ಳಬಹುದಾಗಿದೆ.
ತಾಲ್ಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದ್ದು, 08153-270404 ನಂಬರಿಗೆ ಕರೆ ಮಾಡುವ ಮೂಲಕ ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಮತ್ತು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಕೆಜಿಎಫ್ ಮೀಸಲು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಎಂ.ಡಿ.ಅತೀಕ್ ಉಲ್ಲಾ ಶರೀಫ್ 9845625583 ಮತ್ತು ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್ 8105841396 ರವರುಗಳನ್ನು ನೇಮಕ ಮಾಡಲಾಗಿದ್ದು, ಈ ನಂಬರುಗಳಿಗೆ ಕರೆ ಮಾಡುವ ಮೂಲಕ ಇವರನ್ನು ಸಂಪರ್ಕಿಸಬಹುದಾಗಿದೆ.
ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್, ತಾಪಂ ಇಒ ಮಂಜುನಾಥ್, ಡಿವೈಎಸ್ಪಿ ವಿ.ಎಲ್.ರಮೇಶ್, ಪೌರಾಯುಕ್ತೆ ಅಂಬಿಕಾ ಮೊದಲಾದವರು ಇದ್ದರು.