ಟೊಮೋಟೊ ಮತ್ತು ಈರುಳ್ಳಿ ಬೆಳೆಗಳಿಗೆ ವಿಮೆ ನೋಂದಣಿಗೆ ಅವಕಾಶ
ಸುದ್ದಿ ಮೂಲ ವಾರ್ತೆ
ಚಿಕ್ಕಬಳ್ಳಾಪುರ,ಜೂ.23: 2023-24ನೇ ಸಾಲಿನ ಮುಂಗಾರು ಹಂಗಾಮಿನ ಅವಧಿಗೆ ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ಅಧಿಸೂಚನೆ ಆದೇಶದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೋಟೊ ಹಾಗೂ ಈರುಳ್ಳಿ (ನೀರಾವರಿ) ಬೆಳೆಗಳನ್ನು ವಿಮೆ ಅಡಿ ಅಧಿಸೂಚಿಸಲಾಗಿದ್ದು, ಜಿಲ್ಲೆಯ 6 ತಾಲ್ಲೂಕಿನ ಎಲ್ಲಾ ಹೋಬಳಿಗಳು ಯೋಜನೆಯಡಿ ಬರುತ್ತದೆ. ಈ ಯೋಜನೆಯಡಿಯಲ್ಲಿ ಅಧಿಸೂಚಿಸಿದ ಬೆಳೆಗಳಿಗೆ ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರು ಇಚ್ಚೆಯನುಸಾರ ವಿಮಾ ಪಾವತಿಸಬಹುದಾಗಿರುತ್ತದೆ.
ವಿಮೆ ಮತ್ತು ಕಂತಿನ ವಿವರ
ಜಿಲ್ಲೆ ಆರು ತಾಲ್ಲೂಕುಗಳ ಎಲ್ಲಾ ಪಂಚಾಯತಿಗಳಲ್ಲಿ ಟೊಮೋಟೊ ಬೆಳೆ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ 1,41,500/- ಆಗಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ. (5%) ರೂಗಳಲ್ಲಿ (ಪ್ರತಿ ಹೆ.) 7075/- ರೂ.ಗಳು ಹಾಗೂ ಈರುಳ್ಳಿ (ನೀರಾವರಿ) ಬೆಳೆ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ 80,500/- ಆಗಿದ್ದು, ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ. (5%) ರೂಗಳಲ್ಲಿ (ಪ್ರತಿ ಹೆ.) 4025/- ರೂ.ಗಳ ವಿಮೆ ನೋಂದಣಿಗೆ ಜೂನ್ 30 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಅಗತ್ಯ ದಾಖಲೆಗಳು
ವಿಮೆ ಮಾಡಿಸುವ ಆಸಕ್ತ ರೈತರು ಪಹಣಿ, ಬ್ಯಾಂಕ್ ಖಾತೆ ಪಾಸ್ ಬುಕ್, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಗಳನ್ನು ಮತ್ತು ಸ್ವಯಂಘೋಷಿತ ಬೆಳೆ ವಿವರಗಳನ್ನು ಲಗತ್ತಿಸಿ ಆಯಾ ತಾಲ್ಲೂಕಿನ ತಮ್ಮ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಅಧಿಕೃತ ಬ್ಯಾಂಕುಗಳಲ್ಲಿ (ಖಾತೆ ಹೊಂದಿರುವ ಬ್ಯಾಂಕ್) ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೊಂದಾಣಿ ಮಾಡಿಸಬಹುದು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಟೊಮೋಟೋ ಮತ್ತು ಈರುಳ್ಳಿ(ನೀರಾವರಿ) ಬೆಳೆಯುವ ರೈತ ಬಾಂಧಾವರು ಸದರಿ ಯೋಜನೆಯಡಿ ನೊಂದಾಯಿಸಿ ಉಪಯೋಗ ಪಡೆದುಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕು ತೋಟಗಾರಿಕೆ ಕಛೇರಿಗಳಿಗೆ ಹಾಗೂ ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪ ನಿರ್ದೇಶಕಿ ಗಾಯತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತ್ಯುತ್ತಮ ಸೇವಾ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಸುದ್ದಿ ಮೂಲ ವಾರ್ತೆ ಚಿಕ್ಕಬಳ್ಳಾಪುರ,ಜೂನ್ ೨೨: ಜಿಲ್ಲಾ ಮಟ್ಟದಲ್ಲಿ ಜೂನ್ 27 ರಂದು ನಡೆಯುವ ಶ್ರೀ ಕೆಂಪೇಗೌಡ ಜಯಂತಿ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣಣೀಯವಾಗಿ ಸಾಧನೆ ಮಾಡಿದ 10 ಮಂದಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಆದ್ದರಿಂದ ಕೃಷಿ, ತೋಟಗಾರಿಕೆ, ರೇಷ್ಮೆ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಬರವಣಿಗೆ, ವೈದ್ಯಕೀಯ, ಸಾರ್ವಜನಿಕ ಸೇವೆ, ಶಿಕ್ಷಣ, ಹೈನುಗಾರಿಕೆ, ಮಾಧ್ಯಮ ಕ್ಷೇತ್ರ ಹಾಗೂ ಇತರೆ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನಾಗರೀಕರಿಗೆ ಪ್ರಶಸ್ತಿ ನೀಡಲು ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ತಾವುಗಳು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಿರೊ ಆ ಬಗ್ಗೆ ದಾಖಲೆಗಳೊಂದಿಗೆ ಅರ್ಜಿಯನ್ನು ಜೂನ್ 25 ರ ಸಂಜೆ 5:00 ಗಂಟೆಯೊಳಗೆ ಉಪವಿಭಾಗಾಧಿಕಾರಿಗಳ ಕಚೇರಿಗೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದೆಂದು ಉಪವಿಭಾಗಾಧಿಕಾರಿ ಡಾ|| ಜಿ.ಸಂತೋಷ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.