ಸುದ್ದಿಮೂಲ ವಾರ್ತೆ
ತಿಪಟೂರು, ಜೂ 14 : ಯಾವುದೇ ವಸ್ತುಗಳನ್ನು ಬಳಕೆ ಮಾಡುತ್ತಿದ್ದರೆ ಮಾತ್ರ ಅವುಗಳು ಉಪಯೋಗಕ್ಕೆ ಬರುತ್ತವೆ. ಹಾಗೆಯೇ ಅದರ ಮೌಲ್ಯವು ಸಹ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ, ಸರ್ಕಾರಿ ವಸ್ತುಗಳು, ವಾಹನಗಳು, ಕಚೇರಿಗಳನ್ನು ಪ್ರತಿ ನಿತ್ಯ, ಪ್ರತಿ ಕ್ಷಣ ಉಪಯೋಗಿಸಿದರೂ ವ್ಯವಸ್ಥಿತವಾಗಿರುವುದು ಬೆರಳಣಿಕೆಯಷ್ಟು. ಆದರೆ, ಇಲ್ಲಿನ ಕಟ್ಟಡಗಳು ಉಪಯೋಗವಾಗದೇ ದುಸ್ಥಿತಿಗೆ ತಲುಪಿರುವುದು ತಾಲ್ಲೂಕಿನ ಹಳೆಯ ಉಪವಿಭಾಗಧಿಕಾರಿ ಕಚೇರಿ ಹಾಗೂ ಹಳೆಯ ತಾಲ್ಲೂಕು ಕಚೇರಿ ಕಟ್ಟಡಗಳು.
ತಾಲ್ಲೂಕಿನ ಹಳೆಯ ಉಪವಿಭಾಗಧಿಕಾರಿ ಕಚೇರಿ ಹಾಗೂ ಹಳೆಯ ತಾಲ್ಲೂಕು ಕಚೇರಿಯ ಆವರಣದ ಒಳಗೆ ಸುಮಾರು ಹತ್ತಕ್ಕೂ ಹೆಚ್ಚು ಕೊಠಡಿಗಳಿವೆ. ಸುಸ್ಥಿತಿಯಲ್ಲಿರುವ ಕಟ್ಟಡಗಳು ದುಸ್ಥಿತಿಗೆ ತಲುಪಿವೆ. ಕಚೇರಿಯ ಆವರಣದ ಒಳಗೆ ಗಿಡಗಂಟೆಗಳು ಬೆಳೆದು, ಕಸಕಡ್ಡಿಯಿಂದ ಆವರಿಸಿದ್ದು, ಸಾರ್ವಜನಿಕ ಸೇವೆಗೆ ಬಳಕೆಯಾಗಬೇಕಿದ್ದ ಕಚೇರಿಯು ಪುಂಡರ ಅಡ್ಡವಾಗಿದ್ದು, ಅನೈತಿಕ ಚಟುವಟಿಕೆಗಳ ತಾಣಕ್ಕೆ ದಾರಿಯಾಗಿದೆ.
ತಾಲ್ಲೂಕಿನ ಅಬಕಾರಿ ಇಲಾಖೆ, ಸಣ್ಣನೀರಾವರಿ ಇಲಾಖೆ, ಕಾರ್ಮಿಕ ಇಲಾಖೆ, ಟೂಡಾ ಕಚೇರಿ,
ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರ ಕಚೇರಿ, ಪಿಎಮ್ಜಿಎಸ್ವೈ ಇಲಾಖೆ ಸೇರಿದಂತೆ ಹಲವಾರು ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿದ್ದರೂ ಅವುಗಳ ಉಪಯೋಗಕ್ಕೆ ನೀಡಬಹುದಾಗಿತ್ತು.
ಜಿಲ್ಲೆ ಆಗಲೇಬೇಕಾದ ಎಲ್ಲಾ ಅಂಶಗಳು ತೆಂಗು ಸೀಮೆಯ ತಿಪಟೂರು
ತಾಲ್ಲೂಕಿಗಿದ್ದು, ಹಲವಾರು ಸರ್ಕಾರೇತರ ಸಂಘ ಸಂಸ್ಥೆಗಳಿಗೆ ತನ್ನದೇ ಆದ ಸ್ವಂತ ಕಟ್ಟಡಗಳು ಇಲ್ಲದಿರುವುದು ವಿಪರ್ಯಾಸ.
ಅಬಕಾರಿ ಉಪಧೀಕ್ಷಕರ ಕಚೇರಿಯ ಬಾಡಿಗೆ 19,950 ರೂಗಳು, ಅಬಕಾರಿ ನಿರೀಕ್ಷಕರ ಕಚೇರಿಗೆ 19,950, ಸಣ್ಣ ನೀರಾವರಿ ಇಲಾಖೆ ಕಚೇರಿಗೆ 3,300 ರೂ., ಪಿಎಮ್ಜಿಎಸ್ವೈ ಇಲಾಖೆಯ ಕಟ್ಟಡಕ್ಕೆ 12,000
ರೂ.ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರ ಕಚೇರಿಯ ಬಾಡಿಗೆ 1733 ರೂ. ನಷ್ಟು ಪ್ರತಿ ಮಾಹೆಗೆ ಬಾಡಿಗೆ ನೀಡುತ್ತಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಬಿ.ಸಿ ನಾಗೇಶ್ ಆಡಳಿತಾವಧಿಯಲ್ಲಿ
ಸುಸ್ಥಿತಿಯಲ್ಲಿದ್ದ ಹಳೆಯ ಉಪವಿಭಾಗಧಿಕಾರಿ ಕಚೇರಿ ಹಾಗೂ ಹಳೆಯ ತಾಲ್ಲೂಕು ಕಚೇರಿಯನ್ನು ನೂತನ ಆಡಳಿತ ಸೌಧ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಯಿತು. ಅದೇ ರೀತಿ ಬಾಡಿಗೆ ನೀಡುತ್ತಿರುವ ಕಚೇರಿಗಳನ್ನು ಸ್ಥಳಾಂತರಿಸಬಹುದಿತ್ತು.
ಎರಡು ವರ್ಷ ಕಳೆದರೂ ಸರ್ಕಾರಿ ಕಟ್ಟಡವನ್ನು ಖಾಲಿಯೇ ಬಿಡಲಾಗಿದೆ. ಶಾಸಕರಾದ ಕೆ.ಷಡಕ್ಷರಿ ಅವರು ಇದರ ಬಗ್ಗೆ ಗಮನಹರಿಸಿ ಕಚೇರಿಗಳನ್ನು ಒಂದೇ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿರುವ ಮಾತು.
ಬಾಡಿಗೆಯಲ್ಲಿರುವ ಇಲಾಖೆಗಳ ಮಾಹಿತಿ ಪಡೆದು ಅವುಗಳನ್ನು ಇಲ್ಲಿಗೆ
ಸ್ಥಳಾಂತರ ಮಾಡಲು ಅನುಮೋದನೆಯನ್ನು ಪಡೆದಿದ್ದು ಸರ್ಕಾರದ ಆದೇಶವು ಬಾಕಿಯಿದೆ. ಪವನ್ಕುಮಾರ್, ತಹಶೀಲ್ದಾರ್.