ಸುದ್ದಿಮೂಲ ವಾರ್ತೆ
ತುಮಕೂರು ಜು. 31 : ನಗರದ ಅಮಾನಿಕೆರೆಯನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಅಮಾನಿಕೆರೆಗೆ ಭೇಟಿ ನೀಡಿ, ಕೆರೆಯಲ್ಲಿ ಎಷ್ಟು ಸಾಮರ್ಥ್ಯದ ನೀರು ಶೇಖರಣೆಯಾಗುತ್ತದೆ ಹಾಗೂ ಬೇಸಿಗೆ ಕಾಲದಲ್ಲಿ ಎಷ್ಟು ನೀರು ಇರುತ್ತವೆ ಎಂಬುವುದರ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಂದ
ಪಡೆದುಕೊಂಡರು. ಕೆರೆಯ ಅಂಗಳದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಸಾರ್ವಜನಿಕರ ವಾಯು ವಿಹಾರದ ಸ್ಥಳ, ಫುಡ್ ಕೋರ್ಟ್, ನೃತ್ಯ ಕಾರಂಜಿಯನ್ನು ವೀಕ್ಷಿಸಿದರು. ಮುಂದಿನ ದಿನಗಳಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಸಹ ಪ್ರವಾಸಿಗರಿಗೆ ಕಲ್ಪಿಸಲಾಗುವುದು ಎಂದರು.
ಬಳಿಕ ಮಾತನಾಡಿದ ಅವರು, ಆಗಸ್ಟ್ 15 ರೊಳಗಾಗಿ ಅಮಾನಿಕೆರೆಗೆ ಒಂದು ರೂಪವನ್ನು ನೀಡಲಾಗುವುದು. ಈ ಕೆರೆಯೂ ಪುರಾತನವಾಗಿದ್ದು, ತನ್ನದೇ ಅದ ಇತಿಹಾಸವನ್ನು ಹೊಂದಿದೆ. ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ವಾಜಪೇಯಿ ಅವರು ಕೆರೆಗಳನ್ನು ಅಭಿವೃದ್ದಿಪಡಿಸುವುದಕ್ಕಾಗಿ ದೆಹಲಿಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದರು. ಆ ಸಭೆಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ರಾಜ್ಯದ ಪ್ರಮುಖ ಕೆರೆಗಳ ಪುನಶ್ಚೇತನ
ಮಾಡಲು ಪ್ರಸ್ತಾವನೆಯನ್ನು ಸಿದ್ದಪಡಿಸಿದ್ದರು. ಆ ಪಟ್ಟಿಯಲ್ಲಿ ಅಮಾನಿಕೆರೆಯ ಹೆಸರು ಇತ್ತು ಎಂದು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
ಅಮಾನಿಕೆರೆಗೆ ಹೇಮಾವತಿ ನದಿ ನೀರನ್ನು ಹರಿಸುವುದರ ಮೂಲಕ ಕೆರೆಯ ಜಾಗವನ್ನು ಉಳಿಸುವುದರ ಜೊತೆಗೆ ಆ ಜಾಗವನ್ನು ಒತ್ತುವರಿಯಾಗದ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ನಗರದ ತ್ಯಾಜ್ಯ
ನೀರು ಕೆರೆಗೆ ಬಾರದ ರೀತಿಯಲ್ಲಿ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ನಗರದ ಜನರಿಗೆ ಬುಗಡನಹಳ್ಳಿ ಕೆರೆಯಿಂದ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಮಾನಿಕೆರೆಯ ನೀರನ್ನು ಸಂಸ್ಕರಣೆ ಮಾಡಿ ಬಿಡಲಾಗುತ್ತದೆ. ಅಮಾನಿಕೆರೆಗೆ ಆಗಮಿಸುವ ಪ್ರವಾಸಿಗರಿಂದ ಸಂಗ್ರಹಣೆ ಮಾಡುವ ಪ್ರವೇಶ ಶುಲ್ಕ ಮತ್ತು ಬೋಟಿಂಗ್ ಶುಲ್ಕದ ಹಣವನ್ನು ಇದರ
ನಿರ್ವಹಣೆ ಮಾಡಲು ಉಪಯೋಗಿಸಿಕೊಳ್ಳಲಾಗುತ್ತದೆ. 2024 ರ ವೇಳೆಗೆ ಸ್ಮಾರ್ಟ್ ಸಿಟಿಯ ನಿರ್ವಹಣೆ ಅವಧಿಯು ಮುಕ್ತಾಯವಾಗುತ್ತದೆ. ನಂತರ ಇದರ ನಿರ್ವಹಣೆಯನ್ನು ನಗರಾಭಿವೃದ್ದಿ ಪ್ರಾಧಿಕಾರವು ಮಾಡಲಿದೆ ಎಂದು ತಿಳಿಸಿದರು.
ನಗರದ ಎಸ್ ಮಾಲ್ ಹತ್ತಿರವಿರುವ ಕಿರಿದಾದ ಮೇಲ್ಸೇತುವೆಯಿಂದ ವಾಹನಗಳ ಸಂಚಾರ ದಟ್ಟಣೆಯನ್ನು ತಪ್ಪಿಸಲು ರಸ್ತೆಯನ್ನು ಅಗಲೀಕರಣ ಮಾಡಬೇಕು. ಹೀಗಾಗಿ, ಶೀಘ್ರವಾಗಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತೆ ಅಶ್ವಿಜ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಸ್ಮಾರ್ಟ್ ಸಿಟಿ ಎಂ.ಡಿ. ರಂಗಸ್ವಾಮಿ, ನಗರಾಭಿವೃದ್ದಿ
ಪ್ರಾಧಿಕಾರದ ಆಯುಕ್ತ ಉಮೇಶ್ ಜಾದವ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.