ಸುದ್ದಿಮೂಲ ವಾರ್ತೆ
ಮೈಸೂರು, ಅ. 22 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಅ. 24ರ ಮಂಗಳವಾರ ವಿಜಯದಶಮಿ ಜಂಬೂಸವಾರಿ ನಡೆಯಲಿದೆ. ಅರಮನೆಯೊಳಗಿನ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಂಪ್ರದಾಯಿಕ ಜಂಬೂಸವಾರಿ, ಪಂಜಿನ ಕವಾಯತು ನಡೆಯುವ ಮೂಲಕ ನವರಾತ್ರಿಗೆ ತೆರೆ ಬೀಳಲಿದೆ.
ಈಗಾಗಲೇ ಮೈಸೂರು ಅರಮನೆಯಲ್ಲಿ ಅಂತಿಮ ಹಂತದ ಸಿದ್ಧತೆಗಳು ಸಹ ಪೂರ್ಣಗೊಂಡಿವೆ. ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗಲಿದೆ. ಈ ಹಿನ್ನೆಲೆಯಲ್ಲಿ ಗಜಪಡೆಗಳು ಸಾಗುವ ಮಾರ್ಗವನ್ನು ಅಂದಗೊಳಿಸಲಾಗಿದೆ. ರಾಜ ಬೀದಿಯಲ್ಲಿ ಸಾಗುವ ಅಂಬಾರಿ ಹೊತ್ತ ಆನೆ ತೆರಳುವ ಮಾರ್ಗವನ್ನು ಸ್ವಚ್ಚ ಹಾಗೂ ಅಲಂಕಾರ ಮಾಡಲಾಗಿದೆ.
ಅರಮನೆ ಬಲರಾಮ ದ್ವಾರದಿಂದ ಬನ್ನಿ ಮಂಟಪದವರೆಗೆ ರಾಜಬೀದಿಯನ್ನು ಸಿಂಗಾರ ಮಾಡಲಾಗಿದೆ. ಜನರು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಜಂಬೂ ಸವಾರಿಯನ್ನು ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಜಂಬೂ ಸವಾರಿ ಸಾಗುವ ಹಾದಿಯಲ್ಲಿ ಬಂಬುಗಳು ಹಾಗೂ ಜಾಲರಿಗಳನ್ನು ಜಿಲ್ಲಾಡಳಿತ ಹಾಕಿದೆ. ಕಾರಣ ಅಂಬಾರಿ ಮೇಲೆ ಯಾವುದೇ ವಸ್ತು ಎಸೆಯುವುದನ್ನು ತಪ್ಪಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.
ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ ಸಿಎಂ
ಆರನೇ ಬಾರಿಗೆ ಪುಷ್ಪಾರ್ಚನೆಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಜಿಲ್ಲೆಯವರೇ ಆಗಿದ್ದಾರೆ. ಸಿಎಂ ಆಗಿ ಆರನೇ ಬಾರಿಗೆ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಅ.24ರ ಮಂಗಳವಾರ ಮಧ್ಯಾಹ್ನ 1.46ರಿಂದ 2.08ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿಧ್ವಜ ಪೂಜೆಯನ್ನು ನೆರವೇರಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಸಂಜೆ 4.40 ರಿಂದ 5 ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆಯ ಒಳಾವರಣದಲ್ಲಿ ಸಿದ್ಧಪಡಿಸಲಾದ ವಿಶೇಷ ವೇದಿಕೆಗೆ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಅಭಿಮನ್ಯು ಆನೆ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿ ವಿಗ್ರಹಕ್ಕೆ ಪುಷ್ಪಾರ್ಚನೆ ನೆರವೇರಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇತರರು ಸಾಥ್ ನೀಡಲಿದ್ದಾರೆ.
ರಾಜ್ಯದ 31 ಜಿಲ್ಲೆಗಳ ಕಲೆ, ಸಂಸ್ಕೃತಿ ಬಿಂಬಿಸುವ ಈ ಸ್ತಬ್ಧ ಚಿತ್ರಗಳು ಕಣ್ಮನ ಸೆಳೆಯಲಿವೆ. ಇವುಗಳ ಮಧ್ಯೆ ಮಧ್ಯೆ ಜಾನಪದ ಕಲಾ ತಂಡಗಳು ಮೆರವಣಿಗೆ, ನಂದಿಧ್ವಜ, ವೀರಗಾಸೆ, ನಾದಸ್ವರ, ನೌಫತ್, ನಿಶಾನೆ ಆನೆಗಳು, ಎನ್ಸಿಸಿ, ಸ್ಕೌಟ್ಸ್, ಗೈಡ್ಸ್, ವಿವಿಧ ಪೊಲೀಸ್ ತುಕಡಿಗಳು ಸಹ ಸಾಗಲಿವೆ. ಕೊನೆಯದಾಗಿ ಅಭಿಮನ್ಯು ತನ್ನ ಸಹಚರರಾದ ವಿಜಯ ಹಾಗೂ ವರಲಕ್ಷ್ಮಿ ಜತೆ ಹೆಜ್ಜೆ ಹಾಕಲಿದ್ದಾನೆ. ಐದು ಕಿ.ಮೀ.ವರೆಗೆ ಸಾಗಲಿರುವ ಈ ಮೆರವಣಿಗೆಯು ಬನ್ನಿಮಂಟಪವನ್ನು ತಲುಪಲಿದೆ.
ಬನ್ನಿಮಂಟಪದಲ್ಲಿ ಪಂಜಿನ ಕವಾಯತು
ಸಂಜೆ 7.30ಕ್ಕೆ ಪಂಜಿನ ಕವಾಯತು ಆರಂಭವಾಗಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ವಂದನೆ ಸ್ವೀಕರಿಸಲಿದ್ದಾರೆ. ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಭಾಗಿಯಾಗಲಿದ್ದಾರೆ. ಇದರೊಂದಿಗೆ ನಾಡಹಬ್ಬ ದಸರಾಗೆ ತೆರೆ ಬೀಳಲಿದೆ.
ಲಕ್ಷಾಂತರ ಪ್ರವಾಸಿಗರು ಆಗಮಿಸುವ ನಿರೀಕ್ಷೆ
ಜಂಬೂ ಸವಾರಿ ವೀಕ್ಷಣೆ, ಸ್ತಬ್ಧಚಿತ್ರಗಳ ಮೆರವಣಿಗೆ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಆಸನ ವ್ಯವಸ್ಥೆಯನ್ನೂ ಮಾಡಲಾಗಿದೆ. ವಿವಿಐಪಿ, ವಿಐಪಿ, ಆಹ್ವಾನಿತ ಗಣ್ಯರು, ಗೋಲ್ಡ್ ಕಾರ್ಡ್ ಸೇರಿದಂತೆ ಟಿಕೆಟ್ ಪಡೆದವರಿಗೆ ಅರಮನೆ ಆವರಣದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಇದರ ಹೊರತಾಗಿ ಪುರಭವನ, ನಗರ ಬಸ್ ನಿಲ್ದಾಣ ಎದುರಿನ ಪಾದಚಾರಿ ಮಾರ್ಗದಲ್ಲಿ ಆಸನಗಳನ್ನು ಕಲ್ಪಿಸಲಾಗಿದೆ.
ಜಂಬೂಸವಾರಿ ವೀಕ್ಷಣೆಗೆ ದೇಶ- ವಿದೇಶಗಳ ಪ್ರವಾಸಿಗರ ದಂಡೇ ಮೈಸೂರಿಗೆ ಆಗಮಿಸುತ್ತಿವೆ. ಶಾಲಾ- ಕಾಲೇಜುಗಳಿಗೆ ಸಾಲು ರಜೆಗಳು ಹಾಗೂ, ಶಕ್ತಿ ಯೋಜನೆಯಡಿ ಉಚಿತ ಬಸ್ ಸೌಕರ್ಯ ಇರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.