ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಏ.14: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಮುನಿರಾಜ ಅವರು ಮಾತನಾಡಿ,
ಸ್ವಾತಂತ್ರ್ಯ, ಸಮಾನತೆ ಮೂಲಕ ಜಾತ್ಯತೀತ ಮತ್ತು ಸಮಾಜವಾದಿ ಪ್ರಜಾಪ್ರಭುತ್ವದ ದೇಶ ಕಟ್ಟಲು ಡಾ. ಬಿ.ಆರ್ ಅಂಬೇಡ್ಕರ್ ಎಳೆದು ತಂದು ನಿಲ್ಲಿಸಿದ ವಿಮೋಚನಾ ರಥ ಮುಂದಕ್ಕೆ ಒಯ್ಯಲು ನಾವೆಲ್ಲ ಕೈಜೋಡಿಸೋಣ ಎಂದರು. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು, ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ, ಚಿಂತೆನೆಗಳು ಇಂದಿಗೂ ಯುವಜನೆತೆಗೆ ಸ್ಫೂರ್ತಿ ನೀಡುತ್ತಲೇ ಇದೆ. ಅವರ ಜೀವನ, ಅವರ ತತ್ವಗಳ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು. ಬಿ.ಆರ್.ಅಂಬೇಡ್ಕರ್ ಜೀವನ, ಚರಿತ್ರೆ, ವಿಚಾರಧಾರೆ, ಕೊಡುಗೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಜಾನಪದ ಕಲಾ ತಂಡದವರು ಹೊಸಬಗೆಯಾಗಿ ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸ್ವಾಮಿ, ನಗರಸಭೆ ಕಮಿಷನರ್ ಶ್ರೀಕಾಂತ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸುಬ್ಬಾರೆಡ್ಡಿ, ಸಿಡಿಪಿಓ ನೌತಾಜ್, ಕಾರ್ಯಕರ್ತರು, ವಿವಿಧ ಅನುಷ್ಠಾನ ಇಲಾಖೆಗಳ ಅಧಿಕಾರಿಯವರು ಮತ್ತು ಸಿಬ್ಬಂದಿ, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಇತರರು ಸಹ ಉಪಸ್ಥಿತರಿದ್ದರು.