ಜರುಸಲೇಂ, ಅ.9: ಇಸ್ರೇಲ್ ಮೇಲಿನ ಹಮಾಸ್ ಉಗ್ರರ ದಾಳಿ ಪರಿಣಾಮ ಇಸ್ರೇಲ್ ಬೆಂಬಲಕ್ಕೆ ನಿಂತ ಅಮೆರಿಕ ತನ್ನ ದೇಶದಿಂದ 5000 ಯೋಧರು ಮತ್ತು ಯುದ್ಧನೌಕೆಗಳನ್ನು ಇಸ್ರೇಲ್ಗೆ ಕಳುಹಿಸಿದೆ. ಮತ್ತೊಂದೆಡೆ ಹಮಾಸ್ ಬಂಡುಕೋರರ ಪರ ಇರಾನ್ ನೇರ ಬೆಂಬಲ ಸೂಚಿಸಿದ್ದು, ಮೂರನೇ ದಿನವೂ ಸಹ ಯುದ್ಧ ಭೂಮಿಯಲ್ಲಿ ಬಾಂಬ್ಗಳ ಸುರಿಮಳೆ, ಸಾವುಗಳ ವೇದನೆ ಕಂಡುಬಂದಿದೆ.
ಶನಿವಾರ ಮಧ್ಯಾಹ್ನದಿಂದ ಪ್ರಾರಂಭವಾದ ಎರಡು ದೇಶಗಳ ಮಧ್ಯದ ಯುದ್ಧ ಮೂರನೇ ದಿನವೂ ಸಹ ಮುಮದುವರಿದಿದೆ. ಪರಿಣಾಮ ಸೋಮವಾರ ರಾತ್ರಿವರೆಗೆ ಬಂದ ಮಾಹಿತಿ ಪ್ರಕಾರ ಎರಡೂ ಕಡೆಗಳಿಂದ ಒಟ್ಟಾರೆ 1300 ಮಂದಿ ಮೃತಪಟ್ಟಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮತ್ತೊಂದೆಡೆ ಹಮಾಸ್ ಬಂಡುಕೋರರ ವಿರುದ್ಧ ಇಸ್ರೇಲ್ಗೆ ಬೆಂಬಲ ನೀಡಲು ಅಮೆರಿಕವು ತನ್ನ ನೌಕಾಪಡೆ ಹಾಗೂ ವಾಯುಪಡೆಯ 5000 ಯೋಧರ ತಂಡವನ್ನು ಕಳಿಸಿದೆ. ಈ ತಂಡವನ್ನು ಯುದ್ಧನೌಕೆ ಹಾಗೂ ಯುದ್ಧವಿಮಾನ ಸಮೇತ ಅದನ್ನು ಮೆಡಿಟರೇನಿಯನ್ ಸಮುದ್ರದಲ್ಲಿ ನಿಯೋಜಿಸಲಾಗುತ್ತದೆ. ಯಾವುದೇ ಅಪಾಯದ ಸಂದರ್ಭದಲ್ಲಿ ಈ ತಂಡ ದಾಳಿಗೆ ಸಿದ್ಧವಾಗಿರುತ್ತದೆ.
ಅರಬ್ ರಾಷ್ಟ್ರ ಸೌದಿ ಅರೇಬಿಯಾ ಇಸ್ರೇಲ್ ಪರ ನಿಂತಿದ್ದರಿಂದ ಅದಕ್ಕೆ ಪ್ರತಿಯಾಗಿ ಪ್ಯಾಲಿಸ್ತೀನ್ಗೆ ಇರಾನ್ ನೇರ ಬೆಂಬಲ ಘೋಷಿಸಿದೆ.
ಇರಾನಿನ ಸರ್ವೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಖೊಮೇನಿ, ಅತ್ಯುನ್ನತ ಮಿಲಿಟರಿ ಸಲಹೆಗಾರ ಯಾಹ್ಯಾ ರಹೀಂ ಸಫಾವಿ, ಪ್ಯಾಲೆಸ್ತೀನ್ ಮತ್ತು ಜೆರುಸಲೇಂ ಎರಡಕ್ಕೂ ವಿಮೋಚನೆ ಸಿಗುವರೆಗೂ ಹಮಾಸ್ಗೆ ಇರಾನ್ ಎಲ್ಲಾ ರೀತಿಯ ಬೆಂಬಲ ಮುಂದುವರೆಸಲಿದೆ ಎಂದು ಹೇಳಿಕೆ ನೀಡಿದ್ದಾರೆ.
ನೂರಾರು ಇಸ್ರೇಲಿಗಳನ್ನು ಹಮಾಸ್ ತನ್ನವಶದಲ್ಲಿಟ್ಟುಕೊಂಡಿದೆ. ಇವರನ್ನು ಬಿಡುಗಡೆ ಮಾಡುವ ಸಲುವಾಗಿ ಹಮಾಸ್ ಅಧಿಕಾರಿಗಳೊಂದಿಗೆ ಕತಾರ್ ಮಧ್ಯವರ್ತಿಗಳು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಗಾಜಾಪಟ್ಟಿ ಮೇಲೆ ದಿಗ್ಭಂಧನ:
ಹಮಾಸ್ ನಿಯಂತ್ರಿತ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ‘ಸಂಪೂರ್ಣ ದಿಗ್ಬಂಧನ’ ಘೋಷಿಸಿದೆ. ವಿದ್ಯುತ್, ಆಹಾರ ಹಾಗೂ ಇಂದನ ಸರಬರಾಜಿಗೆ ತಡೆಯೊಡ್ಡಿದೆ. ಇಸ್ರೇಲ್ಗೆ ಅಂಟಿಕೊಂಡಿರುವ ಗಾಜಾ ಪಟ್ಟಿಗೆ ಸಾಗುವ ಎಲ್ಲಾ ಮಾರ್ಗಗಳಿಗೂ ಇಸ್ರೇಲ್ ಸೇನೆ ದಿಗ್ಬಂಧನ ಹೇರಿದೆ ಎಂದು ವರದಿಯಾಗಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಗಾಜಾ ಪಟ್ಟಿಯ ಮೇಲೆ ‘ಸಂಪೂರ್ಣ ದಿಗ್ಬಂಧನ ಹೇರಿದ್ದೇವೆ. ಆಹಾರ, ವಿದ್ಯುತ್ ಹಾಗೂ ಇಂಧನ ಸರಬರಾಜಿಗೆ ತಡೆಯೊಡ್ಡಲಾಗಿದೆ. ಮೃಗೀಯ ಮನಸ್ಥಿತಿಯ ಜನರ ವಿರುದ್ಧದ ನಾವು ತೆಗೆದುಕೊಂಡ ಕಠಿಣ ಕ್ರಮ ಇದಾಗಿದೆ ಎಂದು ಹೇಳಿದ್ದಾರೆ.
‘ಹಮಾಸ್ ನಡೆಸಿರುವ ದಾಳಿ ಇತಿಹಾಸದಲ್ಲೇ ಅತ್ಯಂತ ಕ್ರೂರ ದಾಳಿಯಾಗಿದೆ. ಇಸ್ರೇಲ್ ಯುದ್ದವನ್ನು ಘೋಷಿಸಿದೆ. ನಾಗರಿಕರು ಈ ಸಂಕಷ್ಟವನ್ನು ಎದುರಿಸಲು ಸನ್ನದ್ಧರಾಗಿ. ಶತ್ರುಗಳನ್ನು ನಮ್ಮ ಮುಂದೆ ಮಂಡಿಯೂರಲಿದ್ದಾರೆ,’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ವಿದೇಶಿಗರ ಸಾವು
ಇಸ್ರೇಲ್ನ ಮೇಲೆ ನಡೆದ ಅನಿರೀಕ್ಷಿತ ದಾಳಿಯಲ್ಲಿ ಹಲವಾರು ಅಮೆರಿಕನ್ನರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಹೇಳಿದೆ.
ಇದಲ್ಲದೆ, ತನ್ನ ದೇಶದ 12 ನಾಗರಿಕರು ಹತ್ಯೆಯಾಗಿದ್ದಾರೆ, 11 ಜನರನ್ನು ಅಪಹರಿಸಲಾಗಿದೆ ಎಂದು ಥೈಲ್ಯಾಂಡ್ ಹೇಳಿದೆ. ಬ್ರೆಜಿಲ್, ಬ್ರಿಟನ್, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಮೆಕ್ಸಿಕೊ, ನೇಪಾಳ ಮತ್ತು ಉಕ್ರೇನ್ನ ನಾಗರಿಕರು ಮೃತಪಟ್ಟಿದ್ದರೆ, ಕೆಲವರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಭಾರತೀಯರು ಸುರಕ್ಷಿತ
ಪ್ಯಾಲೇಸ್ತೀನ್ನ ಹಮಾಸ್ ಉಗ್ರರು ದಾಳಿ ನಡೆಸಿರುವ ಇಸ್ರೇಲ್ನಲ್ಲಿ 12 ಸಾವಿರಕ್ಕೂ ಅಧಿಕ ಕರಾವಳಿ ಕನ್ನಡಿಗರಿದ್ದಾರೆ. ಗಡಿನಾಡು ಕಾಸರಗೋಡಿನ ಗೋವಾದ ಗಡಿಭಾಗ ಕಾರವಾರದವರೆಗೆ ಇಸ್ರೇಲ್ನಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರೆಲ್ಲರೂ ಯುದ್ಧ ಪೀಡಿತ ಪ್ರದೇಶದ ಸುತ್ತಮುತ್ತಲೇ ಇದ್ದರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತ:
ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ಮಧ್ಯೆ ಯುದ್ಧ ನಡೆಯುತ್ತಿರುವ ಪರಿಣಾಮ ಕಚ್ಚಾ ಬೆಲೆಗಳ ದರ ಹೆಚ್ಚಿಸುವ ಸಾಧ್ಯತೆಯಿದ್ದು, ಭಾರತವು ಸೋಮವಾರ ಎಚ್ಚರಿಕೆಯಿಂದ ಗಮನಿಸುತ್ತಿದೆ. ಮತ್ತೊಂದೆಡೆ ತನ್ನ ಇಂಧನ ಅಗತ್ಯಗಳನ್ನ ಪ್ರಬುದ್ಧತೆಯಿಂದ ನಿರ್ವಹಿಸುತ್ತಿರುವುದಾಗಿ ಹೇಳಿದೆ.
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, “ಭಾರತವು ಇದನ್ನ ಪ್ರಬುದ್ಧತೆಯಿಂದ ನಿಭಾಯಿಸುತ್ತದೆ. ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಕ್ರಮ ನಡೆಯುತ್ತಿರುವ ಸ್ಥಳವು ಅನೇಕ ವಿಷಯಗಳಲ್ಲಿ ಜಾಗತಿಕ ಶಕ್ತಿಯ ಕೇಂದ್ರವಾಗಿದೆ. ನಾವು ಬಹಳ ಎಚ್ಚರಿಕೆಯಿಂದ ನೋಡುತ್ತೇವೆ” ಎಂದರು.
ಇಸ್ರೇಲ್-ಹಮಾಸ್ ಯುದ್ಧದ ನಂತರ ಜಾಗತಿಕ ಕಚ್ಚಾ ತೈಲ ಬೆಲೆ ಸೋಮವಾರ ಶೇ.2.53 ರಷ್ಟು ಏರಿಕೆಯಾಗಿದೆ.