ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.24: ಕಿಚನ್ನಲ್ಲಿ ಪಕ್ಷದ ಟಿಕೆಟ್ಗಳು ನಿರ್ಧಾರವಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನೀಡಿದ ಹೇಳಿಕೆ ಮಾಸುವ ಮುನ್ನವೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಯಲ್ಲಿ ಉಪಾಹಾರ ಸೇವಿಸುತ್ತಾ ರಾಜ್ಯದ ರಾಜಕೀಯ ಕುರಿತು ಮಹತ್ವದ ಚರ್ಚೆ ನಡೆಸಿದರು.
ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಿರಂತರ ಆರೋಪ ಮಾಡುತ್ತಲೇ ಇದ್ದವು. ಈ ಮಧ್ಯೆ ಇತ್ತೀಚೆಗೆ ಸಿ.ಟಿ. ರವಿ, ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಗೆಲ್ಲುವ ಮಾನದಂಡ ಆಧರಿಸಿ ಟಿಕೆಟ್ ನೀಡಲಾಗುತ್ತದೆ. ಕಿಚನ್ನಲ್ಲಿ ಟಿಕೆಟ್ ನಿರ್ಧಾರ ಆಗುವುದಿಲ್ಲ ಎಂದಿದ್ದರು. ಈ ಹೇಳಿಕೆ ಬಳಿಕ ವೀರಶೈವ ಲಿಂಗಾಯತ ನಾಯಕರು ಸಿ.ಟಿ. ರವಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಚುನಾವಣೆಯ ಮೇಲೆ ಪರಿಣಾಮ ಉಂಟುಮಾಡುತ್ತದೆ ಎಂದೂ ನಿರೀಕ್ಷಿಸಲಾಗಿತ್ತು. ಇದರ ಬೆನ್ನಲ್ಲೇ ಅಮಿತ್ ಶಾ ಪರಿಸ್ಥಿತಿಯನ್ನು ತಣ್ಣಗೆ ಮಾಡಲು ನೇರವಾಗಿ ಯಡಿಯೂರಪ್ಪ ಅವರ ಮನೆಗೆ ಉಪಾಹಾರಕ್ಕೆ ತೆರಳಿದರು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಗುರುವಾರ ರಾತ್ರಿಯೇ ನಗರಕ್ಕೆ ಆಗಮಿಸಿರುವ ಅಮಿತ್ ಶಾ ಶುಕ್ರವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಿತ್ತು. ಆದಕ್ಕೂ ಮೊದಲೇ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಉಪಾಹಾರಕ್ಕಾಗಿ ಆಗಮಿಸಿದರು.
ಅಮಿತ್ ಶಾ ಕಾರಿನಿಂದ ಇಳಿದೊಡೆ ಹೂಗುಚ್ಛ ಹಿಡಿದು ಯಡಿಯೂರಪ್ಪ ಮುಂದೆ ಬಂದರು. ಆಗ ಅಮಿತ್ ಶಾ ಹೂಗುಚ್ಛವನ್ನು ವಿಜಯೇಂದ್ರ ಅವರಿಗೆ ಕೊಡುವಂತೆ ಹೇಳಿದರು. ಬಳಿಕ ವಿಜಯೇಂದ್ರ ಹೂಗುಚ್ಛ ನೀಡಿ ಸ್ವಾಗತಿಸಿದರು. ವಿಜಯೇಂದ್ರ ಬೆನ್ನು ತಟ್ಟಿದ ಅಮಿತ್ ಶಾ ನಗುನಗುತ್ತಾ ಮನೆಯೊಳಗೆ ಪ್ರವೇಶಿಸದರು.
ಅಮಿತ್ ಶಾ ಅವರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಹ ಇದ್ದರು. ಈ ವೇಳೆ ಪ್ರಸ್ತುತ ರಾಜಕೀಯ ಸ್ಥಿತಿಗತಿ ಮತ್ತು ಮುಂದಿನ ಚುನಾವಣೆಗೆ ಸಿದ್ಧತೆಯ ಬಗ್ಗೆ ಯಡಿಯೂರಪ್ಪ ಅವರೊಂದಿಗೆ ಅಮಿತ್ ಶಾ ಚರ್ಚಿಸಿದರು ಎನ್ನಲಾಗಿದೆ.
ಉಪಾಹಾರಕ್ಕೆ ಕುಳಿತ ಸಂದರ್ಭದಲ್ಲಿ ವಿಜಯೇಂದ್ರ ಅವರೇ ಅಮಿತ್ ಶಾ ಅವರಿಗೆ ವಿವಿಧ ತಿನಿಸುಗಳನ್ನು ಬಡಿಸಿದ್ದಾರೆ. ನಗುನಗುತ್ತಾ ಸಮಯ ಕಳೆದ ಅಮಿತ್ ಶಾ, ಯಡಿಯೂರಪ್ಪ ಅವರನ್ನು ಪಕ್ಷ ನಿರ್ಲಕ್ಷಿಸಿಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ. ಉಪಾಹಾರದ ಬಳಿಕ ಕೆಲಕಾಲ ಮಾತುಕತೆಯನ್ನೂ ನಡೆಸಲಾಗಿದೆ. ಬಳಿಕ ಅಮಿತ್ ಶಾ ಅವರನ್ನು ಸತ್ಕರಿಸಿ ಬೀಳ್ಕೊಡಲಾಯಿತು.
ಅಮಿತ್ ಶಾ ಅವರು ಈ ಹಿಂದೆ ಬೆಂಗಳೂರಿಗೆ ಬಂದಾಗ ತಾವಿದ್ದ ಹೋಟೆಲ್ಗೆ ಯಡಿಯೂರಪ್ಪ ಅವರನ್ನು ಕರೆಯಿಸಿಕೊಂಡು ಚರ್ಚೆ ಮಾಡುತ್ತಿದ್ದರು. ಆದರೆ, ಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಬಿಎಸ್ವೈ ನಿವಾಸಕ್ಕೆ ಬಂದ ಅಮಿತ್ ಶಾ ಈ ಮೂಲಕ ಲಿಂಗಾಯತ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಬಹುಮತದ ಸರ್ಕಾರ ಬರಬೇಕು:
‘ಅಮಿತ್ ಶಾ ಅವರ ಭೇಟಿ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಹೊರತು ಬೇರೇನೂ ಚರ್ಚೆಯಾಗಿಲ್ಲ. ಈ ಬಾರಿ ಅತಂತ್ರ ವಿಧಾನಸಭೆ ರಚನೆಯಾಗದೆ ಬಿಜೆಪಿ ಬಹುತಮತದೊಂದಿಗೆ ಮತ್ತೊಮ್ಮೆ ಸರ್ಕಾರ ರಚನೆಯಾಗಬೇಕು ಎಂದು ಶಾ ತಿಳಿಸಿದ್ದಾರೆ’ ಎಂದು ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದರು.