ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.13: ಭಾರಿ ವಿವಾದಕ್ಕೆ ಕಾರಣವಾಗಿದ್ದ ಕೆಎಂಎಫ್ ಮತ್ತು ಅಮುಲ್ ವಿಲೀನ ಪ್ರಸ್ತಾಪವನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ.
ರಾಜ್ಯದ ರೈತರ ಜೀವನಾಡಿಯಾಗಿರುವ ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳನ್ನು ಪರಸ್ಪರ ವಿಲೀನಗೊಳಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾಡಿದ್ದ ಪ್ರಸ್ತಾಪವನ್ನು ಯಾವ ಕಾರಣಕ್ಕೂ ಅನುಷ್ಟಾನಗೊಳಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ವಿಧಾನಸೌಧದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಈ ಕುರಿತು ವಿವರಿಸಿದರಲ್ಲದೆ,ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳನ್ನು ಪರಸ್ಪರ ವಿಲೀನಗೊಳಿಸುವುದು ಅಸಾಧ್ಯದ ಕೆಲಸ ಎಂದರು.
ಯಾವ ಕಾರಣಕ್ಕೂ ರಾಜ್ಯ ಸರ್ಕಾರ ಈ ವಿಲೀನದ ಪರವಾಗಿಲ್ಲ. ಬದಲಿಗೆ ಕೆಎಂಎಫ್ ಸಂಸ್ಥೆಯನ್ನು ಮತ್ತಷ್ಟು ಬಲಿಷ್ಟಗೊಳಿಸಿ ರೈತರಿಗೆ ಮತ್ತಷ್ಟು ಶಕ್ತಿ ನೀಡುವುದು ನಮ್ಮ ಉದ್ದೇಶ ಎಂದರು.
ರೈತರಿಗೆ ಪಾವತಿಸಬೇಕಿರುವ ಹಾಲಿನ ಪ್ರೋತ್ಸಾಹಧನ ಬಾಕಿ ಇದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಆದಷ್ಟು ಶೀಘ್ರವಾಗಿ ಈ ಬಾಕಿಯನ್ನು ನೀಡುತ್ತೇವೆ ಎಂದು ಸ್ಪಷ್ಟ ಪಡಿಸಿದರು.
ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ ಕೃಷಿ ಸಾಲದ ಪ್ರಮಾಣವನ್ನು ಮೂರು ಲಕ್ಷ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳಿಗೇರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ವಿವರಿಸಿದರು.
ಶೂನ್ಯ ಬಡ್ಡಿ ದರದಲ್ಲಿ ನೀಡುವ ಕೃಷಿ ಸಾಲದ ಪ್ರಮಾಣವನ್ನು ಹೆಚ್ಚಿಸುವ ಕುರಿತು ನಾವು ಚುನಾವಣಾ ಪ್ರಭಾಳಿಕೆಯಲ್ಲಿ ಹೇಳಿದ್ದೆವು.ಅದನ್ನು ಜಾರಿ ಮಾಡುವ ಬದ್ಧತೆ ನಮಗೆ ಇದೆ ಎಂದರು.
ಇದೇ ರೀತಿ ರೈತರಿಗೆ ಮಧ್ಯಮಾವಧಿ ಸಾಲದ ರೂಪದಲ್ಲಿ ಶೇಕಡಾ ಮೂರರ ಬಡ್ಡಿ ದರದೊಂದಿಗೆ ಹತ್ತು ಲಕ್ಷ ರೂಪಾಯಿ ಸಾಲ ನೀಡಲಾಗುತ್ತಿದ್ದು,ಈ ಪ್ರಮಾಣವನ್ನು ಹತ್ತರಿಂದ ಇಪ್ಪತ್ತು ಲಕ್ಷ ರೂಪಾಯಿಗಳಿಗೆ ಏರಿಸಲಾಗುವುದು ಎಂದರು.
ಸಹಕಾರ ಸಂಘಗಳಲ್ಲಿ ನಡೆದಿರುವ ಆಕ್ರಮಗಳ ಬಗ್ಗೆ ತನಿಖೆ ನಡೆಸುತ್ತೀರಾ?ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಸಹಕಾರ ಇಲಾಖೆಯಲ್ಲಿ ಕೆಲಸ ಮಾಡಲು ನನ್ನನ್ನು ನೇಮಕ ಮಾಡಲಾಗಿದೆ.ಹೀಗಾಗಿ ನನ್ನ ಮುಂದಿರುವ ಕೆಲಸ ಮಾಡುತ್ತೇನೆ.ತನಿಖೆಗಾಗಿ ಹೆಚ್ಚಿನ ಸಮಯ ವ್ಯಯ ಮಾಡುವುದಿಲ್ಲ ಎಂದರು.
ಸಹಕಾರ ಇಲಾಖೆಯಲ್ಲಿ ಅವ್ಯವಹಾರ ನಡೆದಿದ್ದರೆ ಸಹಜವಾಗಿಯೇ ಅದು ಇಲಾಖೆಯ ತನಿಖೆಗೆ ಒಳಪಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ದೇಶದಲ್ಲಿ ಅಂಬಾನಿ,ಅದಾನಿಗಳ ಸಾಲ ಮನ್ನಾ ಮಾಡಿದರೆ ವಿವಾದವಾಗುವುದಿಲ್ಲ.ಆದರೆ ಸಹಕಾರ ಇಲಾಖೆಯಲ್ಲಿ ಸಣ್ಣ ಪುಟ್ಟ ಅವ್ಯವಹಾರಗಳು ನಡೆದರೆ ದೊಡ್ಡ ಚರ್ಚೆಯಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.