ಸುದ್ದಿಮೂಲ ವಾರ್ತೆ
ಮೈಸೂರು, ಆ.2 : ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನು ನಗರದ ಪೊಲೀಸರು ಬಂಧಿಸಿ ಆತನಿಂದ ಕಾರು ಮತ್ತು ಚಿನ್ನಾಭರಣ ಸೇರಿದಂತೆ 1.19 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿ.ವಿ ಪುರಂ, ಹೆಬ್ಬಾಳ್, ವಿಜಯನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಕಾರುಗಳು ಕಳ್ಳತನವಾಗಿತ್ತು. ಇನೋವಾ, ಫಾರ್ಚೂನರ್, ಮಹೇಂದ್ರ xuv 700 ಕಾರುಗಳನ್ನ ದುಷ್ಕರ್ಮಿಗಳು ಕದ್ದೊಯ್ದಿದ್ದರು.
ಪ್ರಕರಣ ಭೇದಿಸಿದ ವಿಚಾರ ಕುರಿತು ಮಾಹಿತಿ ನೀಡಿದ ನಗರ ಪೋಲಿಸ್ ಆಯುಕ್ತ ರಮೇಶ್ ಬಾನೋತ್, ವಿ.ವಿ ಪುರಂ ನ ಯಾದವಗಿರಿಯಲ್ಲಿ ಕಾರು ಮತ್ತು ಚಿನ್ನಾಭರಣ ಕಳುವಾಗಿದ್ದ ಪ್ರಕರಣದಲ್ಲಿ ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನ ಬಂಧಿಸಲಾಗಿದೆ. ಬಂಧಿತನಿಂಧ ಒಂದು ಕಾರು ಮತ್ತು 750 ಗ್ರಾಂ ಚಿನ್ನಾಭರಣ ಸೇರಿದಂತೆ ಸುಮಾರು 1.19 ಕೋಟಿ ಬೆಲೆ ಬಾಳುವ ವಸ್ತುಗಳನ್ನ ವಶ ಪಡೆಯಲಾಗಿದೆ.
ಆರೋಪಿಯ ವಿರುದ್ಧ ಆಂಧ್ರ, ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿದೆಡೆಗಳಿಂದ 56 ಕೇಸ್ ಗಳು ಆರೋಪಿ ಮೇಲೆ ದಾಖಲಾಗಿವೆ ಸುಮಾರು 35 ವರ್ಷದ ವ್ಯಕ್ತಿ ಅಂತರ ರಾಜ್ಯ ಕಳ್ಳನಾಗಿದ್ದಾನೆ ಎಂದು ತಿಳಿಸಿದರು
ಪೊಲೀಸ್ ತುರ್ತು ವಾಹನ 112ನ್ನು ಸಾರ್ವಜನಿಕರು ಹೆಚ್ಚಿನ ರೀತಿ ಸದುಪಯೋಗ ಪಡಿಸಿಕೊಳ್ಳಬೇಕು. ನಗರದಲ್ಲಿ ಯಾವುದೇ ಗಲಾಟೆ, ವೀಲಿಂಗ್, ಹುಡುಗಿಯರನ್ನ ರೇಗಿಸುವುದು, ಪುಂಡಪೋಕರಿಗಳ ಕಾಟ ಇದ್ದರೆ ತಕ್ಷಣ 112ಗೆ ಕರೆ ಮಾಡಿ. ನಮ್ಮ ಪೋಲಿಸರು ಕೇವಲ 5 ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸುತ್ತಾರೆ. ಪ್ರತಿ ದಿನ ಒಂದು ವಾಹನಕ್ಕೆ ಸರಾಸರಿ 3 ಕರೆ ಮಾತ್ರ ಬರುತ್ತಿವೆ. ಸಾರ್ವಜನಿಕರು ಹೆಚ್ಚಾಗಿ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮನವಿ ಮಾಡಿದರು.