ಸುದ್ದಿಮೂಲ ವಾರ್ತೆ ರಾಯಚೂರು, ಫೆ.15:
ಯಾದಗಿರಿ ಜಿಲ್ಲೆಯ ಪಬ್ಲಿಕ್ ಟಿವಿ ವರದಿಗಾರರಾಗಿ ನೇಮಕಗೊಂಡ ವರದಿಗಾರ ಎಲ್.ಕೆ.ಅಮರೇಶಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟರ್ಸ್ ಗಿಲ್ಡ್ನಿಂದ ಸನ್ಮಾನಿಸಿ ಭಾವನಾತ್ಮಕವಾಗಿ ಬೀಳ್ಕೊಡಲಾಯಿತು.
ಪತ್ರಿಕಾ ಭವನದಲ್ಲಿ ಇಂದು ಬೆಳಿಗ್ಗೆ ಅಮರೇಶ ಅವರಿಗೆ ಉಭಯ ಸಂಘಗಳಿಂದ ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ ಮಾತನಾಡಿ, ಕಳೆದ ನಾಲ್ಕುವರೇ ವರ್ಷ ದಿಗ್ವಿಜಯ ನ್ಯೂಸ್ನ ವರದಿಗಾರರಾಗಿ ಒಂದೇ ಸಂಸ್ಥೆಯಲ್ಲಿ ಅನ್ಯೋನ್ಯತೆಯೊಂದಿಗೆ ಸೇವೆ ಸಲ್ಲಿಸಿ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು. ಅವರು ಮತ್ತೊಂದು ಸಂಸ್ಥೆಗೆ ನೇಮಕಗೊಂಡು ಯಾದಗಿರಿಗೆ ತೆರಳುತ್ತಿದ್ದು ಶುಭವಾಗಲಿ ಎಂದು ಹಾರೈಸಿದರು.
ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಮಾತನಾಡಿ, ಕಿರಿಯರಾಗಿದ್ದರೂ ಎಲ್ಲರ ಜೊತೆ ಸ್ನೇಹ ಸಂಪಾದಿಸಿದ ಯುವ ಪತ್ರಕರ್ತರಷ್ಟೆ ಅಲ್ಲ ಅವರಲ್ಲೊಬ್ಬ ಉತ್ತಮ ಕಲಾವಿದನಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಶ್ಲಾಘಿಸಿದರು. ಜಿಲ್ಲೆಗೆ ವರದಿಗಾರನಾಗಿ ಬಂದ ಮೇಲೆ ಅನೇಕ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವರದಿ ಮಾಡಿದ್ದಾರೆ. ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ, ವರದಿಗಾರ ಶ್ರೀಕಾಂತ್ ಸಾವೂರು, ರಿಪೋರ್ಟರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಜಾಗಟಗಲ್, ಜಯಕುಮಾರ ದೇಸಾಯಿ, ವೆಂಕಟೇಶ ಹೂಗಾರ ಮಾತನಾಡಿ, ಅಮರೇಶ ಅವರ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಯಾದಗಿರಿಯಲ್ಲೂ ಉತ್ತಮ ವರದಿಗಳ ಮೂಲಕ ಜನರ ಧ್ವನಿಯಾಗಲು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿದ ಎಲ್.ಕೆ.ಅಮರೇಶ ಮಾತನಾಡಿ, ಇಲ್ಲಿಂದ ತೆರಳುತ್ತಿರುವುದು ದುಃಖವಾಗುತ್ತಿದೆ ಎಂದು ಭಾವುಕರಾದರು. ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿರುವುದಾಗಿ ಹೇಳಿದರು.
ವೇದಿಕೆಯಲ್ಲಿ ಸಂಘದ ಪ್ರ.ಕಾ. ಎಂ.ಪಾಷಾ ಹಟ್ಟಿ ಸೇರಿದಂತೆ ಹಿರಿಯ, ಕಿರಿಯ ಪತ್ರಕರ್ತರಿದ್ದರು.