ಸುದ್ದಿಮೂಲ ವಾರ್ತೆ
ಮೈಸೂರು, ಅ.2:ಚಲನ ಚಿತ್ರೋತ್ಸವ ಅಂಗವಾಗಿ ನಡೆದ ಸ್ಪರ್ಧೆಗೆ ನಾಮನಿರ್ದೇಶನೊಂಡ 65 ಕಿರುಚಿತ್ರಗಳ ಪೈಕಿ ಉತ್ತಮವಾದುದನ್ನು ಆಯ್ಕೆ ಮಾಡಲು ಸೋಮವಾರ ಪ್ರವಾಸೋದ್ಯಮ ಇಲಾಖೆಯ ಕೆ.ಎಸ್.ಟಿ.ಡಿ ಹಾಲ್ ನಲ್ಲಿ ಚಲನಚಿತ್ರ ಮತ್ತಿತರ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವವರು ಕಿರುಚಿತ್ರಗಳನ್ನು ವೀಕ್ಷಿಸಿದರು.
ಈ ಬಾರಿಯ ದಸರಾ ಚಲನಚಿತ್ರೋತ್ಸವದಲ್ಲಿ ಕಿರು ಚಿತ್ರ ತಯಾರಿಕೆ ಸ್ಪರ್ಧೆ ಸೇರಿದಂತೆ ಹಲವು ವಿಶೇಷತೆಗಳನ್ನು ನೀಡಲು ಚಲನ ಚಿತ್ರೋತ್ಸವ ಉಪ ಸಮಿತಿ ಸಿದ್ಧತೆ ನಡೆಸಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಹತ್ತು ಕಿರು ಚಿತ್ರಗಳನ್ನು ಐನಾಕ್ಸ್ ನಲ್ಲಿ ಪ್ರದರ್ಶಿಸಲಿದೆ.
ಕಿರು ಚಿತ್ರ ಸ್ಪರ್ಧೆಗೆ ಬಂದಂತಹ ಕಿರು ಚಿತ್ರಗಳ ಆಯ್ಕೆ ಸಂಬಂಧ ತೀರ್ಪುಗಾರರಾಗಿ ಕಾವಾದ ಶಿಲ್ಪ ಕಲಾ ವಿಭಾಗದ ಉಪನ್ಯಾಸಕ ವೀರಣ್ಣ ಮಾ ಅರ್ಕಸಾಲಿ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ ಹೇಮಚಂದ್ರ, ರಂಗಭೂಮಿ ಕಲಾವಿದ ಮೈಮ್ ರಮೇಶ್, ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ ಹಾಗೂ ಸಿನಿಮಾ ರಂಗದ ಛಾಯಾಗ್ರಾಹಕ ನಿರೀಕ್ಷಿತ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದಸರಾ ಚಲನಚಿತ್ರೋತ್ಸವ ಉಪ ವಿಶೇಷಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ, ಸಮಿತಿ ಕಾರ್ಯಾಧ್ಯಕ್ಷರಾದ ಕೆ.ಐ.ಡಿ.ಬಿ ಭೂ ಸ್ವಾಧೀನಾಧಿಕಾರಿಯಾದ ಪ್ರಿಯಾ ದರ್ಶಿನಿ, ಕಾರ್ಯದರ್ಶಿ ಹಾಗೂ ವಾರ್ತಾ ಇಲಾಖೆ ಉಪ ನಿರ್ದೇಶಕ ಅಶೋಕ್ ಕುಮಾರ್, ಸಹ ಕಾರ್ಯದರ್ಶಿ ಹಾಗೂ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಮತ್ತು ಶ್ರೇಯಸ್ ಮತ್ತು ಇತರರು ಇದ್ದರು.