ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ. 22 : ದಿ. ಅನಂತಕುಮಾರ್ ಅವರ ಚಿಂತನೆ, ಆಲೋಚನೆಗಳು, ದೂರದೃಷ್ಟಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡಿದ ಕೆಲಸಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ನಗರದ ಬಸವನಗುಡಿಯಲ್ಲಿ ಆಯೋಜಿಸಿದ್ದ ಅನಂತಕುಮಾರ್ ಅವರ 64 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ “ಅನಂತ ನಮನ 64” ಕಾರ್ಯಕ್ರಮದಲ್ಲಿ ಭಾಗವಹಿಸಿ, ಅನಂತ ಚೇತನ ಭಾರತೀಯ ಜ್ಞಾನ ಪ್ರಶಿಕ್ಷಣ ಕೇಂದ್ರವನ್ನು ಅನಾವರಣಗೊಳಿಸಿ ಮಾತನಾಡಿದರು.
ನನಗೆ 25 ಕ್ಕೂ ಹೆಚ್ಚು ವರ್ಷಗಳಿಂದ ಅನಂತಕುಮಾರ್ ಅವರ ಪರಿಚಯವಿದೆ. ಕೊನೆಯ ಕ್ಷಣದವರೆಗೂ ದಣಿವರಿಯಿಲ್ಲದೆ ಕೆಲಸ ಮಾಡಿದ ಕಾಯಕ ಯೋಗಿ ಅವರು. ಅನಂತಕುಮಾರ್ ಸಾರ್ವಜನಿಕ ಜೀವನದಲ್ಲಿ ಮಾತ್ರವಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಚಿರಸ್ಥಾಯಿಯಾಗಿದ್ದರು. ನಿಜವಾದ ದೇಶಭಕ್ತ, ಸಮಾಜ ಸೇವಕ, ಆದರ್ಶವಾದಿ ಮತ್ತು ಶಕ್ತಿಯುತ ಸಾರ್ವಜನಿಕ ಪ್ರತಿನಿಧಿಯೆಂದರೆ ಅದು ಅನಂತಕುಮಾರ್ ಎಂದು ಶ್ಲಾಘಿಸಿದರು.
ರಾಷ್ಟ್ರದ ಸೇವೆ ಮಾಡಲು ಜನರನ್ನು ಪ್ರೇರೇಪಿಸುವ ಉದ್ದೇಶದಿಂದ ಕಳೆದ ವರ್ಷ ಅನಂತ ಪ್ರೇರಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅನಂತಕುಮಾರ್ ಜಿ ಯವರ ಚಿಂತನೆಗಳು ಮತ್ತು ಕಾರ್ಯಗಳನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸವನ್ನು ಅನಂತಕುಮಾರ್ ಪ್ರತಿಷ್ಠಾನದ ವತಿಯಿಂದ ಮಾಡುತ್ತಿರುವ ತೇಜಸ್ವಿನಿ ಅನಂತಕುಮಾರ್ ಅವರ ಕಾರ್ಯ ಶ್ಲಾಘನೀಯ ಎಂದರು.
ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ದೆಹಲಿಯ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ನ ಇನ್ನೋವೇಟಿವ್ ಸೆಲ್ ಆಗಿರುವ ಇಂಡಿಯನ್ ನಾಲೇಜ್ ಸಿಸ್ಟಮ್ ಅನುದಾನದ ಅಡಿಯಲ್ಲಿ ಅನಂತಕುಮಾರ್ ಪ್ರತಿಷ್ಠಾನದ ವತಿಯಿಂದ ಭಾರತೀಯ ಜ್ಞಾನ ಪ್ರಶಿಕ್ಷಣ ಕೇಂದ್ರವನ್ನು ಜಯನಗರದಲ್ಲಿ ಸ್ಥಾಪಿಸಲಾಗುತ್ತಿದೆ. ಈ ಪ್ರಶಿಕ್ಷಣ ಕೇಂದ್ರದ ಮೂಲಕ ಭಾರತೀಯ ಇತಿಹಾಸ, ಗಣಿತ, ವಾಸ್ತುಶಿಲ್ಪ, ಪುರಾಣದ ಬಗ್ಗೆ ನಮ್ಮ ಹಿರಿಯರ ದೃಷ್ಟಿಕೋನವನ್ನ ಇಂದಿನ ಪೀಳಿಗೆಯ ಪಠ್ಯಕ್ರಮದಲ್ಲಿ ಅಳವಡಿಸುವ ಉದ್ದೇಶ ಹೊಂದಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ, ಪ್ರಾಧ್ಯಾಪಕ ಪಿ.ವಿ. ಕೃಷ್ಣ ಭಟ್, ನ್ಯಾಯಮೂರ್ತಿ ಎನ್. ಕುಮಾರ್ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಸಿ ಟಿ ರವಿ, ಮಾಜಿ ವಿಧಾನಸಭೆಯ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಅನಂತಕುಮಾರ ಒಡನಾಡಿಗಳು, ಅಭಿಮಾನಿಗಳು, ಮುಖಂಡರು-ಕಾರ್ಯಕರ್ತರು ಪಾಲ್ಗೊಂಡಿದ್ದರು.