ಸುದ್ದಿಮೂಲ ವಾರ್ತೆ
ಆನೇಕಲ್, ಏ.30: ಮತದಾರರಿಗೆ ತಮ್ಮ ತಮ್ಮ ಮತಗಟ್ಟೆಗಳನ್ನು ಪರಿಚಯಿಸುವ ಕಾರ್ಯಕ್ರಮವೇ ‘ನನ್ನ ನಡೆ ಮತಗಟ್ಟೆ ಕಡೆ’ ಎಂದು ಚುನಾವಣಾ ಅಧಿಕಾರಿ ಚಂದ್ರಶೇಖರ್ ಅವರು ತಿಳಿಸಿದರು.
ಅವರು ಆನೇಕಲ್ ಪಟ್ಟಣದಲ್ಲಿ ತಾಲೂಕು ಸ್ವೀಪ್ ಸಮಿತಿ ಆಯೋಜಿಸಿದ್ದ ನನ್ನ ನಡೆ ಮತಗಟ್ಟೆ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿನ ಮತದಾರರು ಮೇ 10ನೇ ತಮ್ಮ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವದ ಹಬ್ಬ ಆಚರಿಸಬೇಕು. ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರಿಗೆ ತಮ್ಮ ವ್ಯಾಪ್ತಿಯ ಮತಗಟ್ಟೆಗಳನ್ನು ಪರಿಚಯಿಸುವ ಮೂಲಕ ಮತ ಹಾಕುವಂತೆ ಅವರನ್ನು ಜಾಗೃತಿಗೊಳಿಸುವ ಕಾರ್ಯಕ್ರಮವಾಗಿದ್ದು, ಪ್ರತಿಯೊಬ್ಬರು ನೈತಿಕ ನ್ಯಾಯಸಮ್ಮತ ಚುನಾವಣೆಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಚುನಾವಣೆಗೆ ಸಂಬಂಧಿಸಿದಂತೆ ದೂರುಗಳು ಅಥವಾ ಮಾಹಿತಿಗಳನ್ನ ತಿಳಿಯಬೇಕಾದರೆ ಸಾರ್ವಜನಿಕರು ಸಿ. ವಿಜಲ್ ವಿ ಎಚ್ ಎಂ ಸಹಾಯವಾಣಿಗಾಗಿ 1950, ಮುಂತಾದ ಚುನಾವಣಾ ಆಪ್ ಗಳನ್ನು ಬಳಸಿಕೊಂಡು ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನ ತಿಳಿದುಕೊಳ್ಳಲು ಸಹಕಾರವಾಗುತ್ತದೆ ಎಂದು ತಿಳಿಸಿದರು.
ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಹಾಗೂ ತಾಲೂಕ್ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ನಾರಾಯಣಸ್ವಾಮಿ ಮಾತನಾಡಿ, ಮತದಾನದ ಪ್ರಮಾಣ ಹೆಚ್ಚಳ ವಾಗುವಂತೆ ಸ್ವೀಪ್ ಸಮಿತಿಯಿಂದ ಜಾಗೃತಿ ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ಬೀದಿ ನಾಟಕ ಅಪಾರ್ಟ್ಮೆಂಟ್ಗಳ ಅಸೋಸಿಯೇಷನ್ಗಳು, ಕಟ್ಟಡ ನಿರ್ಮಾಣಗಳ ಕಾರ್ಮಿಕರೊಂದಿಗೆ, ಕೈಗಾರಿಕೆ ಪ್ರದೇಶಗಳ ಸಂಘಗಳೊಂದಿಗೆ, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವಿಕಲಚೇತನರು, ತೃತೀಯ ಲಿಂಗಗಳು ಹಾಗೂ 80 ವರ್ಷ ಮೀರಿದ ಮತದಾರರಿಗೆ ಹೊಸ ಯುವ ಮತದಾರರಿಗೆ ಮತದಾನ ಮಾಡುವಂತೆ ಜಾಗೃತಿ ಮಾಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ನಂತರ ಮತದಾರರ ಪ್ರತಿಜ್ಞೆಯನ್ನು ಬೋಧಿಸಿದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮಿ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ನೇತ್ರಾವತಿ ತಾಲೂಕು ವೈದ್ಯಾಧಿಕಾರಿ ರವಿ , ಸೀಡ್ಸ್ ಮತ್ತು ಗಮನ ಸಂಸ್ಥೆಯ ಪದಾಧಿಕಾರಿಗಳು, ಬೂತ್ ಮಟ್ಟದ ಅಧಿಕಾರಿಗಳು ಶಿಕ್ಷಕರು ಮಹಿಳೆಯರು ವಿದ್ಯಾರ್ಥಿಗಳು ಸಾರ್ವಜನಿಕರು ಮುಂತಾದವರು ಪಾಲ್ಗೊಂಡಿದ್ದರು.
ನನ್ನ ನಡೆ ಮತಗಟ್ಟೆ ಕಡೆಗೆ ಕಾರ್ಯಕ್ರಮದ ಅಂಗವಾಗಿ ಕಾಲ್ನಡಿಗೆ ಜಾಥಾ, ಡೊಳ್ಳು ಕುಣಿತ, ಬೀದಿ ನಾಟಕ, ಚುನಾವಣೆಗೆ ಸಂಬಂಧಿಸಿದ ಗೀತೆಗಳು ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು. ಪಟ್ಟಣದ ರಸ್ತೆಗಳಲ್ಲಿ ಜಾಥಾ ನಡೆಸಿ ಮತಗಟ್ಟೆ ಬಳಿ ಬಂದು ಧ್ವಜಾರಹಣ ನೆರವೇರಿಸಿ ಚುನಾವಣಾ ಮಹತ್ವವನ್ನ ತಿಳಿಸಲಾಯಿತು.