ಸುದ್ದಿಮೂಲ ವಾರ್ತೆ
ಆನೇಕಲ್, ಜು 11 : ಸಮುದಾಯ ಹಾಗೂ ಜನಹಿತಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ಸಂಘ ತೊಡಗಿಸಿಕೊಂಡಿದೆ ಎಂದು ಸಾಹಿತ್ಯೋಪಾಸಕ ಜಿ. ಮುನಿರಾಜು ಹೇಳಿದರು.
ಆನೇಕಲ್ ಪಟ್ಟಣದಲ್ಲಿರುವ ನವಜ್ಯೋತಿ ಕನ್ನಡ ಕಲಾ ಸಂಘ ಐವತ್ತು ವಸಂತಗಳನ್ನು ಪೂರೈಸುತ್ತಿರುವ ಅಂಗವಾಗಿ ಕನಕಮಹೋತ್ಸವ ವೇದಿಕೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನವಜ್ಯೋತಿ ಸಂಘ ಪರಿಶುದ್ಧವಾದ ಅಮೃತದ ಮಡು ಅಥವಾ ತಿಳಿನೀರಿನ ಕೊಳವಿದ್ದಂತೆ. ಅದರ ಪದಾಧಿಕಾರಿಗಳು , ಸದಸ್ಯರು ಯಥಾಕೊಳದ ಪರಿಶುದ್ಧತೆಗೆ ಅಡ್ಡಿ ಉಂಟು ಮಾಡದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಂಘ ಸಂಸ್ಥೆ ನೂರು ವಸಂತಗಳನ್ನು ಪೂರೈಸಲು ಅನುಕೂಲವಾಗುತ್ತದೆಯೇ ಹೊರತು ಯಥಾ ಕೊಳದಲ್ಲಿ ಮಿಂದು ಮದವೇರಿ ಮರ್ಧಿಸಿ, ಪರಿಶುದ್ಧ ನೀರಿನ ಕೊಳವನ್ನು ಮಲೀನಗೊಳಿಸುವಂತಹ ಎಮ್ಮೆಯಂತಹ ಸದಸ್ಯರು ಸಂಘದ ಏಳಿಗೆಗೆ ಬಾಧಕರಾಗುತ್ತಾರೆ. ಸಾಧನಾಶೀಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಎಮ್ಮೆ ಸ್ವಭಾವದ ಸದಸ್ಯರ ಬಗ್ಗೆ ಮುನ್ನೆಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿ. ಉಮಾಪತಿರವರು ಸಂಘ ನಡೆದು ಬಂದ ಹಾದಿ ಹಾಗೂ ಸಾಧನೆಗಳ ಬಗ್ಗೆ ಮೆಲುಕು ಹಾಕಿದರು. ಆನೇಕಲ್ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆದೂರು ಪ್ರಕಾಶ್, ಸಂಘದ ಸಾಧನಾಶೀಲತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾ. ನಂ. ಕುಮಾರಸ್ವಾಮಿ ಹಾಗೂ ಎ. ವಿ. ವಸಂತರಾಜು ರವರು ನವ ಜ್ಯೋತಿ ಕನ್ನಡ ಕಲಾ ಸಂಘದ ಕಾರ್ಯವೈಖರಿಯನ್ನು ಸ್ಮರಿಸಿ ಹಾರೈಸಿದರು.
ನವಜ್ಯೋತಿ ಕನ್ನಡ ಕಲಾ ಸಂಘದ 50ನೇ ವರ್ಷದ ವಾರ್ಷಿಕೋತ್ಸವದ ನೆನಪಿನಲ್ಲಿ ಆನೇಕಲ್ ಪಟ್ಟಣದ ನರಸಮ್ಮ ವೆಂಕಟರಾಜು,ದೇವರಾಜು ,ನರಸಿಂಹಯ್ಯ ಮುಂತಾದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.
ಆನೇಕಲ್ ತಾಲ್ಲೂಕು ಪ್ರಾ.ಶಾ.ಶಿ.ಸಂಘದ ಅಧ್ಯಕ್ಷರಾದ ಕೆ. ಚಂದ್ರಶೇಖರ್, ಖಜಾಂಚಿ ಎಂ. ಗೋವಿಂದರಾಜು, ಭುವನೇಶ್ವರ್, ಸೌಭಾಗ್ಯಮ್ಮ ಉಪಸ್ಥಿತರಿದ್ದರು.