ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ.18: ತಾಲೂಕಿನ ಅನುಗೊಂಡಹಳ್ಳಿ ಹೋಬಳಿಯ ದೇವನಗುಂದಿ ಗ್ರಾಮ ಪಂಚಾಯ್ತಿಯ 2ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಅನ್ನಪೂರ್ಣ, ಉಪಾಧ್ಯಕ್ಷರಾಗಿ ಹೆಚ್.ವಿ ಹರೀಶ್ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತ್ರಿವೇಣಿ ತಿಳಿಸಿದ್ದಾರೆ.
ಇಂದು ನಡೆದ ಎರಡನೇ ಅವಧಿ ಚುನಾವಣೆಯಲ್ಲಿ ಅನ್ನಪೂರ್ಣ 15 ಮತ ಪಡೆದರೆ ಇವರ ಪ್ರತಿ ಸ್ಪರ್ಧಿ ಧನಲಕ್ಷ್ಮೀ 8 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿ ಹರೀಶ್ 13 ಮತ ಪಡೆದರೆ ಇವರ ಪ್ರತಿ ಸ್ಫರ್ಧಿ ಡಿ.ಪಿ ಮಂಜುನಾಥ್ 10 ಮತ ಪಡೆದಿದ್ದು, ನೂತನ ಅಧ್ಯಕ್ಷರಾಗಿ ಅನ್ನಪೂರ್ಣ, ಉಪಾಧ್ಯಕ್ಷರಾಗಿ ಹೆಚ್.ವಿ ಹರೀಶ್ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಅನುಗೊಂಡನಹಳ್ಳಿ ಹೋಬಳಿ ಕಾಂಗ್ರೆಸ್ ಮುಖಂಡ ಬಿ.ಎಂ ಪ್ರಕಾಶ್ ಮಾತನಾಡಿ, ಇಂದು ನಡೆದ ಗ್ರಾಮ ಪಂಚಾಯಿತಿ ಸದಸ್ಯರು ಒಗ್ಗಟ್ಟಿನಿಂದ ಮತ ಚಲಾಯಿಸಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷರುಗಳಿಗೆ ಮತ್ತು ಸದಸ್ಯರಿಗೆ ಹೋಬಳಿಯ ಎಲ್ಲ ಮುಖಂಡರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಿಗೆ ಎರಡು ಮತಗಳನ್ನು ಬಿಜೆಪಿ ಬೆಂಬಲಿತರು ಮತ ನೀಡಿದ್ದಾರೆ. ಪಕ್ಷಾತೀತವಾಗಿ ಗ್ರಾಪಂ. ವ್ಯಾಪ್ತಿಗೆ ಒಳಪಡುವ ಎಲ್ಲ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷೆ ಅನ್ನಪೂರ್ಣ ಮತ್ತು ಉಪಾಧ್ಯಕ್ಷ ಹರೀಶ್ ಮಾತನಾಡಿ, ಎಲ್ಲಾ ಗ್ರಾಮ ಪಂಚಾಯ್ತಿಯ ಸದಸ್ಯರುಗಳಿಗೆ ಅಭಿನಂದನೆ ತಿಳಿಸುತ್ತಾ ಗ್ರಾಪಂ. ವ್ಯಾಪ್ತಿಯ 10 ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಯಾವುದೇ ಪಕ್ಷಪಾತ ಮಾಡದೆ ಸಮಸ್ಯೆಗಳಿಗೆ ಸ್ಪಂದಿಸಿ ಎಲ್ಲರ ಜೊತೆಗೂಡಿ ಗ್ರಾಮಗಳ ಅಭಿವೃದ್ಧಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಬೆಂಬಲಿತರು ನೂತನ ಅಧ್ಯಕ್ಷೆ, ಉಪಾಧ್ಯಕ್ಷರಾಗಿ ಅಯ್ಕೆಯಾದ ಸುದ್ದಿ ತಿಳಿದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಜಯಕಾರ ಹಾಕುತ್ತಾ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಶಾಸಕ ಶರತ್ ಬಚ್ಚೇಗೌಡ ಶುಭ ಕೋರಿದ್ದಾರೆ.
ಈ ಸಂದರ್ಭದಲ್ಲಿ ಅನುಗೊಂಡಹಳ್ಳಿ ಹೋಬಳಿಯ ಹೋಬಳಿಯ ಮುಖಂಡರಾದ ಮುತ್ಸಂದ್ರ ಟಿ.ಕೃಷ್ಣರೆಡ್ಡಿ, ದೇವನಗುಂದಿ ಡಿ.ಕೆ ಮಂಜುನಾಥ್, ಹಾರೋಹಳ್ಳಿ ದೇವರಾಜ್, ಸಮೇತನಹಳ್ಳಿ ಸೊಣ್ಣಪ್ಪ, ಡಿ.ಎಸ್ ಮಂಜುನಾಥ್, ಮಾಜಿ ಅಧ್ಯಕ್ಷ ಮಾರೇಗೌಡ, ವಿಜಿಕುಮಾರ್, ಹಂದೇನಹಳ್ಳಿ ಶಂಕರಪ್ಪ, ಕೇಶವರೆಡ್ಡಿ, ಗುಂಡೂರು ಜೆಸಿಬಿ ನಾರಾಯಣಸ್ವಾಮಿ, ಶ್ರೀನಿವಾಸ್. ಮಾರಂಗೆರೆ ನಾಗರಾಜ್, ವೆಂಕಟೇಶಪ್ಪ, ಅನುಗೊಂಡಹಳ್ಳಿ ಗ್ರಾಪಂ ಅಧ್ಯಕ್ಷ ಸಂತೋಷ್, ಪಿಡಿಒ ಹರೀಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.