ಸುದ್ದಿಮೂಲ ವಾರ್ತೆ ಸಿಂಧನೂರು, ಫೆ. 14:
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೆಆರ್ಪಿಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಪ್ರತಿ ರೈತ ಕುಟುಂಬಕ್ಕೆ ಪ್ರತಿ ವರ್ಷ 15 ಸಾವಿರ ರೂ. ನೀಡಲಾಗುವುದು ಎಂದು ಕೆಆರ್ಪಿಪಿ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಘೋಷಣೆ ಮಾಡಿದರು.
ತಾಲೂಕಿನ ಅಂಬಾಮಠದಲ್ಲಿ ಮಂಗಳವಾರ ಕೆಆರ್ಪಿಪಿಯಿಂದ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಕೃಷಿ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ರೈತರಿಗೆ 9 ತಾಸುಗಳ ಉಚಿತ ವಿದ್ಯುತ್, ಬಸವೇಶ್ವರ ಜಲಯಜ್ಞೆ ಯೋಜನೆಯಡಿ ಏತ ನೀರಾವರಿ ಯೋಜನೆಗಳ ಜಾರಿ. ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುವದಾಗಿ ತಮ್ಮ ಕೃಷಿ ಪ್ರಣಾಳಿಕೆಯಲ್ಲಿ ಅಳಡಿಸಿದ್ದನ್ನು ಘೋಷಿಸಿದರು.
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ತರುವಲ್ಲಿ ನನ್ನ ಪಾತ್ರ ಪ್ರಮುಖವಾಗಿತ್ತು. ಜನಾರ್ಧನ ರಡ್ಡಿ ಜೊತೆ ಯಾರು ಬರುತ್ತಾರೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಯಾವ ನಾಯಕರನ್ನು ನಂಬಿ ನಾನು ಹೊಸ ಪಕ್ಷ ಕಟ್ಟಿಲ್ಲ. ಜನರನ್ನು ನಂಬಿ ರಾಜಕೀಯಕ್ಕೆ ಬಂದಿದ್ದೇನೆ. ಜನರೇ ನನ್ನ ಶಕ್ತಿ. ಉತ್ತರ ಕರ್ನಾಟಕದಲ್ಲಿ 40 ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿ ಘೋಷಣೆ:
ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ನೆಕ್ಕಂಟಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಜನಾರ್ಧನ ರೆಡ್ಡಿ ಘೋಷಣೆ ಮಾಡಿದರು. ಜೊತೆಗೆ ಪಕ್ಷದ ಸಿಂಧನೂರು ತಾಲೂಕಾ ಅಧ್ಯಕ್ಷರನ್ನಾಗಿ ಸಿದ್ದಯ್ಯ ಸ್ವಾಮಿ ಜಂಭುನಾಥನಹಳ್ಳಿ ರನ್ನು ನೇಮಿಸಿರುವುದಾಗಿ ಹೇಳಿದರು.
ಕೆಆರ್ಪಿಪಿ ಪಕ್ಷದ ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಅರುಣ ಜನಾರ್ಧನ ರೆಡ್ಡಿ ಮಾತನಾಡಿ, ಕೆಆರ್ಪಿಪಿ ರೈತರ ಪರವಾರ ಪಕ್ಷವಾಗಿದೆ. ಜನಾರ್ಧನ ರೆಡ್ಡಿ ಅವರಿಗೆ ರೈತರ ಬಗ್ಗೆ ವಿಶೇಷ ಕಾಳಜಿಯಿದೆ. ಸ್ಥಳೀಯ ಸಮಸ್ಯೆಗಳನ್ನು ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಪರಿಹರಿಸಿಕೊಳ್ಳಲು ಸಾಧ್ಯ. ರೈತರ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಪ್ರತ್ಯೇಕ ಕೃಷಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ರೈತರು ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಂಧನೂರು ಅಭ್ಯರ್ಥಿ ನೆಕ್ಕಂಟಿ ಮಲ್ಲಿಕಾರ್ಜುನ, ಅಲಿಖಾನ್, ಕುರ್ದು ಸಾಹೇಬ್, ಸಿರಗುಪ್ಪಾದ ಧರಪ್ಪ ನಾಯಕ ಹಾಗೂ ಇತರರು ಇದ್ದರು.
ಪಾದಯಾತ್ರೆ:
ಇದಕ್ಕೂ ಮುನ್ನ ತಾಲೂಕಿನ ಬಂಗಾರಿಕ್ಯಾಂಪಿನಿಂದ ಅಂಬಾಮಠ ದವರೆಗೆ ಕೆಆರ್ಪಿಪಿ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ, ಸಿಂಧನೂರು ಕ್ಷೇತ್ರದ ಅಭ್ಯರ್ಥಿ ನೆಕ್ಕಂಟಿ ಮಲ್ಲಿಕಾರ್ಜುನ ನೇತೃತ್ವದಲ್ಲಿ ಪಾದಯಾತ್ರೆ ಮಾಡಿದರು.