ಸುದ್ದಿಮೂಲ ವಾರ್ತೆ,
ಸಿಂಧನೂರು.ಏ.೧೨ –ವಿಧಾನಸಭಾ ಚುನಾವಣೆಯ ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಾಗಿದ್ದು, ನಮ್ಮ ಮನೆತನದ ಕೆ.ಕರಿಯಪ್ಪ ಅವರಿಗೆ ಟಿಕೆಟ್ ಸಿಕ್ಕಿದ್ದು ಖುಷಿ ತಂದಿದೆ ಎಂದು ಮಾಜಿ ಸಂಸದ, ಕೆಪೆಗ್ ನಿಗಮದ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಅಭಿಪ್ರಾಯಪಟ್ಟರು.
ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ನನ್ನ ವಯಸ್ಸಿನ ಆಧಾರದಲ್ಲಿ ನೀಡಿಲ್ಲ. ಇದು ನನಗೆ ಮೊದಲೇ ಗೊತ್ತಿತು. ಆದರೂ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲಿದ್ದಾರೆ ಎನ್ನುವ ವಿಶ್ವಾಸದಿಂದ ನಾನು ಟಿಕೆಟ್ಗೆ ಪ್ರಯತ್ನ ಮಾಡಿದೆ. ವರಿಷ್ಠರು ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ ಎಂದರು.
ನಿವೃತ್ತಿ:
ಪ್ರಸ್ತುತ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಿದ್ದೆ. ಆದರೆ ಈ ಸಂದರ್ಭದಲ್ಲಿ ನಿರ್ಧಾರ ಕೈಗೊಂಡರೆ ಬೇರೆ ಸಂದೇಶ ರವಾನೆಯಾಗಲಿದೆ. ೨೦೧೩ರಲ್ಲೂ ನಾನು ರಾಜಕೀಯ ನಿವೃತ್ತಿ ಬಗ್ಗೆ ಆಲೋಚನೆ ಮಾಡಿದ್ದೆ. ನನ್ನ ಭವಿಷ್ಯಕ್ಕಿಂತ ಹಿಂಬಾಲಕರ ಹಿತದೃಷ್ಠಿಯಿಂದ ಸಕ್ರೀಯ ರಾಜಕಾರಣದಲ್ಲಿ ಮುಂದುವರೆದೆ. ನಾಲ್ಕೈದು ದಶಕಗಳ ಚುನಾವಣಾ ರಾಜಕಾರಣದಿಂದ ನಿವೃತ್ತಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲು ನಿರ್ಧರಿಸಿದ್ದೇನೆ ಎಂದರು.
ಸ್ವಾಗತಾರ್ಹ:
ಬಿಜೆಪಿ ಹೈಕಮಾಂಡ್ ಎಲ್ಲಾ ರೀತಿಯಿಂದಲೂ ಆಲೋಚಿಸಿ ಟಿಕೆಟ್ ಘೋಷಣೆ ಮಾಡಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೆಲವು ಮನೆತನಗಳಿಗೆ ಅಧಿಕಾರ ಸಿಮೀತವಾಗಬಾರದು. ಜಿಡ್ಡುಗಟ್ಟಿದ ರಾಜಕಾರಣವಾಗಬಾರದು ಎನ್ನುವ ನಿಟ್ಟಿನಲ್ಲಿ ಎಲ್ಲಾ ವರ್ಗಗಳಿಗೂ ಅವಕಾಶ ಕಲ್ಪಿಸಿದೆ. ಯುವಕರಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಬದಲಾವಣೆ ಸ್ವಾಗತಾರ್ಹ ಎಂದು ಹೇಳಿದರು.
ಕಾಂಗ್ರೆಸ್ನಿಂದ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವದರ ಮೇಲೆ ರಾಜಕೀಯ ಚಿತ್ರಣ ಇರಲಿದೆ. ನಮ್ಮ ಪಕ್ಷದ ಮುಖಂಡ ಅಮರೇಗೌಡ ವಿರುಪಾಪುರ ಪಕ್ಷ ಬಿಟುವದಿಲ್ಲ. ಆಕಾಂಕ್ಷಿಗಳು ಬಹಳ ಸಂಖ್ಯೆಯಲ್ಲಿದ್ದರಿಂದ ಯಾರು ಮಾಡುತ್ತಾರೆ. ಯಾರು ಮಾಡುವದಿಲ್ಲ… ಕಾದು ನೋಡಬೇಕಿದೆ. ನಮ್ಮ ಪಕ್ಷದ ಅಭ್ಯರ್ಥಿ ಕೆ.ಕರಿಯಪ್ಪ ಅವರನ್ನು ಗೆಲ್ಲಿಸಿಕೊಂಡು ಬರುವ ಪ್ರಯತ್ನ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಮುಖಂಡರಾದ ಸಿದ್ರಾಮೇಶ ಮನ್ನಾಪುರ, ಸೋಮಣ್ಣ ಪತ್ತಾರ ಹಾಗೂ ಇತರರು ಇದ್ದರು.