ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.23: ನಗರದ ಹೆಬ್ಬಗೋಡಿ ಸಮೀಪದ ತಿರುಪಾಳ್ಯ ಕೆರೆಯಲ್ಲಿ ನಡೆಯುತ್ತಿರುವ ಭೂಮಾಫಿಯಾಗಳ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಮೋಹನ್ ದಾಸರಿ ನೇತೃತ್ವದಲ್ಲಿ ನಿಯೋಗ ಭೇಟಿ ಮಾಡಿ ಇಂದು ಪರಿಶೀಲನೆ ನಡೆಸಿದರು.
ಸ್ಥಳದಲ್ಲಿ ಮಾತನಾಡಿದ ಮೋಹನ್ ದಾಸರಿ ‘ತಿರುಪಾಳ್ಯ ಕೆರೆ 16 ಎಕರೆ ವಿಸ್ತೀರ್ಣವಿದ್ದು , ಭೂ ಮಾಫಿಯಾ ಗಳು ಸಾಕಷ್ಟು ಒತ್ತುವರಿ ಮಾಡಿಕೊಂಡಿರುವುದು ಕಂಡು ಬರುತ್ತಿದೆ. ಕೆರೆಗಳ ಪುನರುಜ್ಜೀವನ ಕಾರ್ಯದಲ್ಲಿ ಸಾಕಷ್ಟು ವರ್ಷಗಳಿಂದ ತೊಡಗಿಸಿಕೊಂಡಿರುವ ಆನಂದ್ ಮಲ್ಲಿಗೆವಾಡ್ ಈ ಕೆರೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಈಗಾಗಲೇ ಭೂ ಮಾಫಿಯಾ ಗಳಿಂದ ಪುನರುಜ್ಜೀವನ ಕಾರ್ಯಕ್ಕೆ ಸಾಕಷ್ಟು ಅಡೆತಡೆಗಳನ್ನು ನೀಡಿ, ಬೆದರಿಕೆಗಳನ್ನು
ಒಡ್ದಲಾಗುತ್ತಿದ್ದು, ಆಮ್ ಆದ್ಮಿ ಪಕ್ಷವು ಈ ಕೆರೆಯ ಪುನರುಜ್ಜೀವನಕ್ಕಾಗಿ ಆನಂದ್ ರವರೊಂದಿಗೆ ಸದಾ ಕಾಲ ಇರುತ್ತದೆ ಹಾಗೂ ಈ ಮಾಫಿಯಾಗಳ ವಿರುದ್ಧ ಹೋರಾಟ ಮಾಡಲಾಗುತ್ತದೆ,’ ಎಂದು ಎಚ್ಚರಿಸಿದರು.
ಈಗಾಗಲೇ ಈ ಕೆರೆಗೆ ಸಾಕಷ್ಟು ರಾಸಾಯನಿಕಗಳನ್ನು ಹಾಗೂ ಕಲುಷಿತ ನೀರನ್ನು ಹರಿಯ ಬಿಡಲಾಗುತ್ತಿದೆ. ಕೂಡಲೇ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಇತ್ತ ಕಡೆ ಗಮನಹರಿಸಿ ಸೂಕ್ತ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಪರಿಶೀಲನೆಯ ಸಂದರ್ಭದಲ್ಲಿ ಮಲ್ಲಿಗೆವಾಡ್ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಅಶೋಕ್ ಮೃತ್ಯುಂಜಯ, ಬೆಂಗಳೂರು ದಕ್ಷಿಣ ಕ್ಷೇತ್ರದ ಮುಖಂಡರುಗಳಾದ ಜೋಶವ, ರೇಖಾ ರೆಡ್ಡಿ ಅನಿಲ್, ಕೃಷ್ಣ ಮಾದೇಶ್, ಪ್ರವೀಣ್, ಅಭಿಷೇಕ್ಹರ್ಷವರ್ಧನ್ ಹಾಗೂ ಇನ್ನಿತರರು ಭಾಗವಹಿಸಿದ್ದರು.