ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.1: ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣದ ವಿದ್ಯಾರ್ಥಿಗಳಾದ ಶಿವರಾಜ ಮತ್ತು ಸಂಜನಾ ಸಾಮಾನ್ಯ ಜ್ಞಾನ ವಿಭಾಗದಲ್ಲಿ ಅಮೆರಿಕಾ ಕೊಡು ಮಾಡುವ ‘ವರ್ಲ್ಡ್ ಟ್ಯಾಲೆಂಟ್’ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಇಬ್ಬರಿಗೆ ಸರ್ಕಾರದ
ಮತ್ತು ಸಹಕಾರ ಅಗತ್ಯವಿದೆ ಎಂದು ಅಪ್ಪು ವಿದ್ಯಾಧಾಮ ಮುದಗಲ್ ಸಂಸ್ಥೆಯ ಡಾ ಮಹಾಂತೇಶ ಛಲವಾದಿ ಮನವಿ ಮಾಡಿದ್ದಾರೆ.
ಬೆಂಗಳೂರು ಪ್ರೆಸ್ಕ್ಲಬ್ನಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಅಣ್ಣ ತಂಗಿಯಾಗಿರುವ ಶಿವರಾಜ ಮತ್ತು ಸಂಜನಾ, ಸಾಮಾನ್ಯ ಜ್ಞಾನ ವಿಭಾಗದಲ್ಲಿ ರಾಜ್ಯ ರಾಷ್ಟ್ರಕ್ಕೆ ಕೀರ್ತಿಯನ್ನು ತಂದಿದ್ದಾರೆ. ಸುಮಾರ್ 20 ವರ್ಲ್ಡ್ ಮತ್ತು 2 ಏಷ್ಯನ್ ಬುಕ್ ಆಫ್ ರೆಕಾರ್ಡ್, ನಾಲ್ಕು ಇಂಡಿಯನ್ ಬುಕ್ ಆಫ್ ರೆಕಾರ್ಡ್, ಕರ್ನಾಟಕ ಬುಕ್ ಆಫ್ ರೆಕಾರ್ಡ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ, ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಪುನೀತ್ ರಾಜಕುಮಾರ್ ಅವರ ಎಲ್ಲಾ ಸಿನಿಮಾಗಳ ಹೆಸರು, 195 ದೇಶಗಳು ಹಾಗೂ ರಾಜಧಾನಿಗಳು, ಅಲ್ಲಿನ ಕರೆನ್ಸಿಗಳ ಹೆಸರು, 100 ಕೆಮಿಕಲ್ ಫಾರ್ಮುಲಾಗಳು, ಕನ್ನಡದ ಶ್ರೇಷ್ಠ ಸಾಹಿತಿಗಳು, ಕೃತಿಗಳು ಮತ್ತು ಅವರ ಕಾವ್ಯನಾಮಗಳು, ಒಟ್ಟಾರೆ ಪ್ರಪಂಚದ ಎಲ್ಲಾ ಹಾಗೂ ಹೋಗುಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾರೆ ಎಂದು ಹೇಳಿದರು.
ಈ ಇಬ್ಬರು ಪುಟಾಣಿಗಳು ಒಬ್ಬ ಆಶಾ ಕಾರ್ಯಕರ್ತೆಯ ಮಕ್ಕಳು. ಬಡತನದಲ್ಲಿ ಹುಟ್ಟಿ ಈ ಮಟ್ಟಕ್ಕೆ ಪ್ರತಿಭಾವಂತರಾಗಿದ್ದಾರೆ. ಇವರ ಪ್ರತಿಭೆಯನ್ನು ಪ್ರೋತ್ಸಾಹಿಸಲು ಮತ್ತು ಅದನ್ನು ಮತ್ತಷ್ಟು ಉನ್ನತಕ್ಕೆ ಕೊಂಡೊಯಲು ಇವರಿಗೆ ಆರ್ಥಿಕ ನೆರವು ಬೇಕಾಗಿದೆ. ಸರ್ಕಾರ ಕೂಡಲೇ ಇವರ ಪ್ರತಿಭೆಯನ್ನು ಗುರುತಿಸಿ, ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಗೌರವಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುಟಾಣಿ ಪ್ರತಿಭೆಗಳಾದ ಶಿವರಾಜ ಮತ್ತು ಸಂಜನಾ ಇಬ್ಬರೂ ಸಹ ಅಪ್ಪು ಸಿನಿಮಾಗಳ ಹೆಸರುಗಳು, ಸಾಹಿತಿಗಳ ಹೆಸರುಗಳನ್ನು ಹೇಳುವ ಮೂಲಕ ಅಚ್ಚರಿಗೊಳಿಸಿದರು.