ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ. 16 : ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಅಭಿವೃದ್ದಿ ಕಾಮಗಾರಿಗೆ ಬಿಡುಗಡೆಗೆ ಮಾಡಿದ್ದ ಅನುದಾನವನ್ನು ಸರ್ಕಾರ ತಡೆ ಹಿಡಿದಿದ್ದು ತ್ವರಿತವಾಗಿ ಬಿಡುಗಡೆ ಮಾಡಿ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಡಿ.ಕೆ.ನಾಗರಾಜ್ ಮನವಿ ಮಾಡಿದರು.
ಹೊಸಕೋಟೆ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ನಗರೋತ್ಥಾನ ನಾಲ್ಕನೇ ಹಂತದಲ್ಲಿ 25 ಕೋಟಿ ಹಾಗೂ ಸಚಿವರ ವಿವೇಚನಾ ಅಡಿಯಲ್ಲಿ 30 ಕೋಟಿ ಹಣದಲ್ಲಿ ಟೆಂಡರ್ ಆಗಿ ಕಾಮಗಾರಿ ನಡೆಯುತ್ತಿದ್ದವು.
ನಗರೋತ್ಥಾನ ಯೋಜನೆಯ 25 ಕೋಟಿಯಲ್ಲಿ 20 ಕೋಟಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭ ಮಾಡಿ 10 ಕೋಟಿ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಇನ್ನೂ 10 ಕೋಟಿ ಹಣ ಬಾಕಿ ಇದೆ ಎಂದರು.
ಸಚಿವರ ವಿವೇಚನಾ ಅಡಿಯಲ್ಲಿ ಬಂದಿದ್ದ 30 ಕೋಟಿ ಅನುದಾನದಲ್ಲಿ 1 ಕೋಟಿ ಸರ್ಕಾರಕ್ಕೆ ವಾಪಸ್ ಹೋಗಿದ್ದು ಉಳಿದ 29 ಕೋಟಿಯಲ್ಲಿ 4 ಕೋಟಿ ಕೆಲಸ ಆಗಿದೆ. ಬಾಕಿ 25ಕೋಟಿ ಇದೆ. ಆದರೆ, ನಂತರ ಬಂದ ಕಾಂಗ್ರೆಸ್ ಸರ್ಕಾರ ಕಾಮಗಾರಿ ಬಿಲ್ಗಳನ್ನು ತಡೆಹಿಡಿದಿದ್ದು ರಸ್ತೆ, ಬೀದಿ ದೀಪ, ಚರಂಡಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ.
ಈಗ ನಗರಸಭೆಗೆ ಆಡಳಿತ ಅಧಿಕಾರಿ ಜಿಲ್ಲಾಧಿಕಾರಿಗಳೇ ಆಗಿದ್ದು, ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಬಾಕಿ ಅನುದಾನ ಇದೆ. ಆದ್ದರಿಂದ ಇತ್ತ ಗಮನಹರಿಸಿ ಕಾಮಗಾರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ನಗರಸಭೆ ಸದಸ್ಯ ಗುಲ್ಜಾರ್, ನಗರಸಭೆ ಸದಸ್ಯರಾದ ಗುಳ್ಳು ನಾಗರಾಜ್, ಸೋಮಶೇಖರ್, ರಾಮಾಂಜಿನಿ, ಬಸವರಾಜ್, ವೆಂಕಟೇಶ್, ಶೋಭಾ ಶಿವಾನಂದ್, ಆಶಾ ರಾಜಶೇಖರ್, ರತ್ನಮ್ಮ ರಾಜಣ್ಣ, ಶೋಭಾ ಜುಂಜಪ್ಪ, ಬಿಜೆಪಿ ಮುಖಂಡ ಶೌರತ್ ಹಾಜರಿದ್ದರು.