ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.13 :ರಾಜ್ಯದಲ್ಲಿ ಪ್ರಮುಖ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಲ್ಲಿ ನಡೆಯುತ್ತಿರುವ ಪ್ಯಾಕೇಜ್ ಪದ್ಧತಿ, ಬಾಕಿ ಮೊತ್ತ ಬಿಡುಗಡೆ ಮತ್ತು ಟೆಂಡರ್ ಪ್ರಕ್ರಿಯೆಗಳಲ್ಲಿ ಶೇ. 40 ಕ್ಕಿಂತಲೂ ಹೆಚ್ಚಿನ ಪ್ರಮಾಣದ ಲಂಚಗುಳಿತನ, ಭ್ರಷ್ಟಾಚಾರ ನಡೆದಿರುವ ಹಿನ್ನಲೆಯಲ್ಲಿತನಿಖೆಗಾಗಿ ನ್ಯಾ. ಹೆಚ್.ಎನ್. ನಾಗಮೋಹನ್ದಾಸ್ ರವರ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ನೇಮಿಸಲಾಗಿದೆ.
ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ ಅಸೋಸಿಯೇಷನ್ ಸಲ್ಲಿಸಿರುವ ಮನವಿಯಲ್ಲಿನ ಆರೋಪಗಳ ಕುರಿತು ತನಿಖೆಯನ್ನು ನಡೆಸಲು ಅನುವಾಗುವಂತೆ ಆಯೋಗವು ಪ್ರಥಮವಾಗಿ ಈ ವಿಚಾರಣೆಯನ್ನು 2019ರ ಜು. 26 ರಿಂದ 2023 ರ ಮಾರ್ಚ್ 31ರ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ತನಿಖಾ ಆಯೋಗದ ವ್ಯಾಪ್ತಿಗೆ ವಹಿಸಲಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಾದ ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗಳಲ್ಲಿ ಟೆಂಡರ್ ಪ್ರಕ್ರಿಯೆ, ಪ್ಯಾಕೇಜ್ ಪದ್ದತಿ, ಪುನರ್ಅಂದಾಜು ಬಾಕಿ ಮೊತ್ತ ಬಿಡುಗಡೆಗೆ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಸ್ಥಳ ಹಾಗು ದಾಖಲಾತಿಗಳ ಪರಿಶೀಲನೆಯೊಂದಿಗೆ ವಿವರವಾದ ತನಿಖೆಯನ್ನು ನಡೆಸಿ ಲೋಪ ದೋಷಗಳ ಮಾಹಿತಿ ಹಾಗೂ ತತ್ಸಂಬಂಧಿತ ಆರೋಪಿತರ ಸ್ಪಷ್ಟ ಗುರುತಿಸುವಿಕೆಯ ಸಹಿತ ಪರಿಪೂರ್ಣ ತನಿಖೆಯನ್ನು ನಡೆಸಲಾಗುವುದು.
ಈ ಹಿನ್ನಲೆಯಲ್ಲಿ ಸಾರ್ವಜನಿಕರು ಯಾವುದೇ ರೀತಿಯ ಸಲಹೆ, ಆಕ್ಷೇಪಣೆ, ಅಹವಾಲು, ದಾಖಲೆಗಳು, ಹೇಳಿಕೆಗಳು ಇದ್ದಲ್ಲಿ ನ. 10 ರ ಒಳಗೆ ಕಚೇರಿ ವೇಳೆಯಲ್ಲಿ ವಿಚಾರಣಾ ಆಯೋಗ, 3ನೇ ಮಹಡಿ, ಲೋಕೋಪಯೋಗಿ ಇಲಾಖೆ ಮುಖ್ಯಕಟ್ಟಡ, ಕೆ.ಆರ್.ವೃತ್ತ, ಬೆಂಗಳೂರು ಇಲ್ಲಿಗೆ ಖುದ್ದಾಗಿ ಅಥವಾ ಅಂಚೆಯ ಮೂಲಕ ಅಥವಾ ಇ-ಮೇಲ್ [email protected] ಗೆ ಸಲ್ಲಿಸುವಂತೆ ನ್ಯಾ. ಹೆಚ್.ಎನ್.ನಾಗಮೋಹನ್ದಾಸ್, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.