ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.2: ಅರಣ್ಯ ಇಲಾಖೆ ಕುರಿತು ಮಾತನಾಡುವಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಮೈಬಣ್ಣದ ಕುರಿತು ಅಪಮಾನಕಾರಿ ಹೇಳಿಕೆ ನೀಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ತೀರ್ಥಹಳ್ಳಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮಾತನಾಡಿದ್ದ ಆರಗ ಜ್ಞಾನೇಂದ್ರ, ‘ನಮ್ಮ ದುರಾದೃಷ್ಟಕ್ಕೆ ಆ ಭಾಗದವರು ಫಾರೆಸ್ಟ್ ಮಿನಿಸ್ಟರ್ ಆಗಿದ್ದಾರೆ. ಫಾರೆಸ್ ನೋಡದವರು ಸಚಿವರಾಗಿದ್ದಾರೆ. ಅವರಿಗೆ ಮರ-ಗಿಡಿ ಎಂದರೆ ಏನೆಂಬುದು ಗೊತ್ತಿಲ್ಲ, ಮರದ ನೆರಳು ಗೊತ್ತಿಲ್ಲ. ಸುಟ್ಟು ಕರಕಲಾಗಿರ್ತಾರೆ.. ನಮ್ಮ ಖರ್ಗೆಯವರನ್ನು ನೋಡಿದರೆ ಗೊತ್ತಾಗುತ್ತೆ.. ಪಾಪ ಈಶ್ವರ ಖಂಡ್ರೆ ಅವರಿಗೆ ತಲೆಗೂದಲು ಮುಚ್ಚಿಕೊಂಡಿರುವುದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ. ಅದೇ ನೆರಳು ಅವರಿಗೆ.’ ಎಂದು ವಿವಾದಾತ್ಮಕವಾಗಿ ಮಾತನಾಡಿದ್ದರು.
ಆರಗ ಜ್ಞಾನೇಂದ್ರ ಅವರ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಸೇರಿ ವಿವಿಧ ವರ್ಗದವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಈ ಕುರಿತು ಮಾತನಾಡಿದ ಸಚಿವ ಈಶ್ವರ ಖಂಡ್ರೆ, ‘ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಮಹಾತ್ಮಾ ಗಾಂಧೀಜಿ ಹುಟ್ಟಿದ ದೇಶದಲ್ಲಿ ಬಿಜೆಪಿ ವರ್ಣಭೇದ ನೀತಿಯನ್ನು ಪೋಷಿಸುತ್ತಿರುವುದು ನಿಜಕ್ಕೂ ದುರ್ದೈವ. ನಮ್ಮ ಭಾಗದ ಜನರು ಸುಟ್ಟು ಕರಕಲಾಗಿರುತ್ತಾರೆ. ಖರ್ಗೆ ಅವರನ್ನು ನೋಡಿದರೆ ಇದು ಗೊತ್ತಾಗುತ್ತದೆ ಎಂದು ಹೇಳುವ ಮೂಲಕ ಆರಗ ಜ್ಞಾನೇಂದ್ರ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮತ್ತು ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಷ್ಟೇ ಅಲ್ಲದೆ ರಾಜ್ಯದ ಅದರಲ್ಲೂ ಇಡೀ ಕಲ್ಯಾಣ ಕರ್ನಾಟಕದ ಜನತೆಗೆ ಅವಮಾನ ಮಾಡಿದ್ದಾರೆ ಇದು ಮಾಜಿ ಸಚಿವರ ಘನತೆಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಆರಗ ಜ್ಞಾನೇಂದ್ರ ಅವರು ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಮರಗಳಿಲ್ಲ ನೆರಳಿಲ್ಲ ನಮ್ಮ ತಲೆಕೂದಲೇ ನೆರಳು ಎಂದೆಲ್ಲಾ ತುಚ್ಛವಾಗಿ ಮಾತನಾಡಿರುವುದು ಅವರ ಕೀಳು ಅಭಿರುಚಿಗೆ ಹಿಡಿದ ಕನ್ನಡಿಯಾಗಿದೆ. ಗೃಹ ಮಂತ್ರಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಮನುಷ್ಯರ ಬಣ್ಣದ ಮೇಲೆ ಟೀಕೆ ಮಾಡಿ, ಈ ರೀತಿ ನಾಡಿನ ಒಂದು ಕಾಲು ಕೋಟಿ ಜನತೆಗೆ ಅವಮಾನ ಮಾಡಿರುವುದು ನಿಜಕ್ಕೂ ದುರ್ದೈವ ಎಂದು ತಿಳಿಸಿದ್ದಾರೆ.
ಆರಗ ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ತಮಗಷ್ಟೇ ಅಲ್ಲದೆ ಇಡೀ ಕಲ್ಯಾಣ ಕರ್ನಾಟಕದ ಜನತೆಯ ಬೇಷರತ್ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.
ನಿಮ್ಹಾನ್ಸ್ಗೆ ಸೇರಿಸೋಣ:
ಮತ್ತೊಂದೆಡೆ ನವದೆಹಲಿಯಲ್ಲಿ ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಆರಗ ಜ್ಞಾನೇಂದ್ರ ಅವರನ್ನು ನಿಮ್ಹಾನ್ಸ್ ಗೆ ಕಳಿಸೋಣ. ಬೆಂಗಳೂರಲ್ಲಿ ನಿಮಾನ್ಸ್ ಆಸ್ಪತ್ರೆ ಉತ್ತಮವಾಗಿದೆ. ಅದು ಫರ್ಸ್ಟ್ ಕ್ಲಾಸ್ ಆಗಿದೆ. ಅಲ್ಲಿಗೆ ಆರಗ ಜ್ಞಾನೇಂದ್ರ ಅವರನ್ನು ಕಳುಹಿಸೋಣ ಎಂದರು.
ಕ್ಷಮೆ ಯಾಚಿಸಿದ ಆರಗ ಜ್ಞಾನೇಂದ್ರ
ತಮ್ಮ ಹೇಳಿಕೆ ವಿವಾದದ ರೂಪ ಪಡೆಯುತ್ತಿದ್ದಂತೆ ಈ ಕುರಿತು ಆರಗ ಜ್ಞಾನೇಂದ್ರ ಅವರು ಬುಧವಾರ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
‘ನಾನು ಹಿರಿಯ ನಾಯಕರಾದ ಖರ್ಗೆ ಅವರ ಬಗ್ಗೆಯಾಗಲೀ, ಸಚಿವ ಈಶ್ವರ ಖಂಡ್ರೆ ಅವರ ಬಗ್ಗೆಯಾಗಲೀ ಅಗೌರವದಿಂದ ಮಾತನಾಡಿಲ್ಲ. ಅರಣ್ಯದ ಕುರಿತು ಮಾತನಾಡುವಾಗ ಈ ರೀತಿ ಹೇಳಿದ್ದೇನೆ. ನನ್ನ ಹೇಳಿಕೆಯಿಂದ ಅವರಿಗೆ ನೋವುಂಟಾಗಿದ್ದಲ್ಲಿ’ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.