ಸುದ್ದಿಮೂಲ ವಾರ್ತೆ
ಅರಸೀಕೆರೆ, ಏ, 9: ಇತ್ತೀಚೆಗೆ ಅರಸೀಕೆರೆಯ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಎಂ.ಶಿವಲಿಂಗೇಗೌಡ ಅವರು ಭಾನುವಾರ ಅಧಿಕೃತವಾಗಿ ಕಾಂಗ್ರೆಸ್ ಸೇರಿದರು.
ಅರಸೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಮೂರು ಬಾರಿ ಜೆಡಿಎಸ್ನಿಂದ ಶಾಸಕರಾಗಿದ್ದ ಶಿವಲಿಂಗೇಗೌಡ ಅವರು ಈಚೆಗಷ್ಟೇ ಜೆಡಿಎಸ್ ಪಕ್ಷ ತೊರೆದಿದ್ದರು. ಜೊತೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೂಡ ಸಲ್ಲಿಸಿದ್ದರು. ಇದೀಗ ಅರಸೀಕೆರೆ ಪಟ್ಟಣದ ಜೇನುಕಲ್ಲು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ಶಿವಲಿಂಗೇಗೌಡ ಅವರು, ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದು ಹೇಗೆ ಕಾಂಗ್ರೆಸ್ ಸೇರಿದರೋ, ಅದೇ ರೀತಿ ನಾನು ಕಾಂಗ್ರೆಸ್ ಸೇರಬೇಕು ಅಂತ ನನ್ನ ಹಣೆಯಲ್ಲೂ ಬರೆದಿತ್ತು ಎಂದು ಕಾಣುತ್ತದೆ. ಅದಕ್ಕೆ ಇವತ್ತು ನಾನು ಬಹಳ ಸಂತೋಷದಿಂದ ಕಾಂಗ್ರೆಸ್ ಸೇರಿದ್ದೇನೆ ಎಂದು ಹೇಳಿದರು.
ಅರಸೀಕೆರೆ ಕ್ಷೇತ್ರಕ್ಕೆ ಬಿಜೆಪಿಯಿಂದ ನಿಲ್ಲಲು ಬಂದಿರುವ ಅಭ್ಯರ್ಥಿ ಎಲ್ಲರ ಮನೆಗೂ ಒಂದು ಪುಸ್ತಕ ಕಳುಹಿಸಿದ್ದು, ಎಲ್ಲಾ ಅಭಿವೃದ್ಧಿ ಕೆಲಸಗಳು ಬಿಜೆಪಿ ಸರ್ಕಾರದಿಂದ ಆಗಿರುವುದು ಎಂದು ಸುಳ್ಳು ಹೇಳಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಅರಸೀಕೆರೆ ಅಭಿವೃದ್ಧಿ ಆಗಿಲ್ಲ. 538 ಹಳ್ಳಿಗಳಿಗೆ ಕುಡಿಯುವ ನೀರು, ಎತ್ತಿನಹೊಳೆ ಯೋಜನೆ ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಬಿಜೆಪಿಯಿಂದ ಕೆಲವೊಂದು ಆಗಿರಬಹುದು, ಆಗಿಲ್ಲ ಅಂತ ಹೇಳಿಲ್ಲ. ಕಾಂಕ್ರಿಟ್ ರಸ್ತೆಗಾಗಿ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಹಣ ಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ನಾನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರನ್ನು ನಂಬಿ ಬಂದಿದ್ದೇನೆ. ನನಗೆ 65 ವರ್ಷ ಆಗಿದೆ. ಹಾಲಲ್ಲಿ ಆದರೂ ಹಾಕಿ ನೀರಲ್ಲಾದರೂ ಹಾಕಿ. ಕಾಂಗ್ರೆಸ್ ಸೇರಿರುವುದಕ್ಕೆ ರಾಥೋಡ್ ಒಬ್ಬರು ಇದ್ದಾರೆ. ಅವರೇ ಸಾಕ್ಷಿ. ನಾನು ಯಾವ ಹಳ್ಳಿಗಾದರೂ ಹೋದರೆ ನೀವು ಸಚಿವರಾಗ್ತೀರಾ ಅಂತ ಕೇಳ್ತಾರೆ. ನೀವು ಅದೇನ್ ಮಾಡ್ತಿರೋ ಮಾಡಿ ಎಂದು ಕಾಂಗ್ರೆಸ್ ನಾಯಕರ ಮುಂದೆ ತಮ್ಮ ಆಸೆ ಬಿಚ್ಚಿಟ್ಟರು.
ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ರಾಜಕಾರಣಿಗಳ ಮಾನ-ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕುತ್ತಿದೆ. ಇಂತಹ ನೀತಿಗೆಟ್ಟ, ಮಾನಗೆಟ್ಟ ಆಡಳಿತ ನಾನು ನೋಡಿಲ್ಲ. ನಿಮ್ಮ ಪಕ್ಷಕ್ಕೆ ಉಳಿಗಾಲವಿಲ್ಲ, ಹತ್ತಿರಕ್ಕೆ ಬರುತ್ತಿದೆ ಎಂದು ಶಿವಲಿಂಗೇಗೌಡ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.