ಹೊಸಕೋಟೆ, ಜು 19 : ಶಿಕ್ಷಣ ಇಲಾಖಾಧಿಕಾರಿಗಳು ವಿದ್ಯಾರ್ಥಿಗಳ ಕೊರತೆ ನೆಪವೊಡ್ಡಿ ಸರಕಾರಿ ಶಾಲೆಯನ್ನು ಶಾಶ್ವತವಾಗಿ ಮುಚ್ಚಿದ್ದು, ದೂರದ ಶಾಲೆಗೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ನಲವಾಗಿಲು ಗ್ರಾ.ಪಂ ವ್ಯಾಪ್ತಿಯ ಅರೇಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ 13ಕ್ಕೂ ಹೆಚ್ಚು ಮಕ್ಕಳು 2 ವರ್ಷಗಳಿಂದ 2 ರಿಂದ 8 ಕಿಲೋ ಮೀಟ ದೂರದ ವಿವಿಧ ಗ್ರಾಮಗಳ ಶಾಲೆಗೆ ಚಳಿ, ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೆ ಕಾಲ್ನಡಿಗೆಯಲ್ಲಿ ನಡೆದು ಹೋಗು ವಂತಾಗಿದೆ. ಇನ್ನು ಕೆಲ ಪೋಷಕರು ಶಿಕ್ಷಕರ ಗೈರು ಹಾಜರಿಗೆ ಬೇಸತ್ತು ಬೇರೆ ಶಾಲೆಗಳತ್ತ ಮುಖ ಮಾಡಿದ್ದಾರೆ.
ನಾಲೈದು ವರ್ಷಗಳ ಹಿಂದೆ ಈ ಶಾಲೆಗೆ ವರ್ಗಾವಣೆಯಾಗಿದ್ದ ಶಿಕ್ಷಕಿಯೊಬ್ಬರು ಅದೇ ಗ್ರಾಮದಲ್ಲಿ ನೆಲಸಿ ಉತ್ತಮವಾಗಿ ಪಾಠ ಪ್ರವಚನ ಮಾಡುತ್ತಿದ್ದರು. ಕೊರೊನಾ ಲಾಕ್ ಡೌನ್ ನಂತರ ಶಿಕ್ಷಕಿ ಬೆಂಗಳೂರಿನಿಂದ ಬರಲು ತೊಡಗಿದ್ದರಿಂದ ನಿಗದಿತ ಸಮಯಕ್ಕೆ ಶಾಲೆಗೆ ಬರಲು ಸಾಧ್ಯವಾಗದೆ ಕಾಲಕ್ರಮೇಣ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಕ್ಷೀಣಿಸತೊಡಗಿತು.
ಪ್ರಭಾವ ಬೀರಿದ ಶಿಕ್ಷಕಿ: ಶಿಕ್ಷಕಿ ನಿರಂತರ ವಾಗಿ ಗೈರಾಗುತ್ತಿರುವ ಬಗ್ಗೆ ಗ್ರಾಮಸ್ಥರು ಇಲಾಖಾಧಿಕಾರಿಗಳ ಗಮನಕ್ಕೆ ತಂದು ಒತ್ತಡ ಹೇರಿದಾಗ ಏಕೋಪಾಧ್ಯಾಯ ಶಾಲಾ ಶಿಕ್ಷಕಿ ಅಧಿಕಾರಿಗಳ ಮೇಲೆ ಪ್ರಭಾವ ಬಳಸಿ ಬೆಂಗಳೂರು ನಗರದ ಶಾಲೆಗೆ ನಿಯೋಜನೆ ಗೊಂಡರು. ಇಲಾಖಾಧಿಕಾರಿಗಳು ಪ್ರತಿನಿತ್ಯ ಒಂದೊಂದು ಶಾಲೆಯ ಶಿಕ್ಷಕರನ್ನು ತಾತ್ಕಾಲಿಕವಾಗಿ ಈ ಶಾಲೆಗೆ ನಿಯೋಜನೆಗೊಳಿಸಿದರು .
ನೆಪಮಾತ್ರಕ್ಕೆ ಶಿಕ್ಷಕರು: ಹೆಚ್ಚುವರಿ ಶಿಕ್ಷಕರು ಕಾಟಾಚಾರಕ್ಕೆ ಬಂದು ಹೋಗುವ ಪ್ರವೃತ್ತಿ ಬೆಳೆಸಿಕೊಂಡು ಕಳದೆರಡು ವರ್ಷಗಳಲ್ಲಿ ಶಿಕ್ಷಕರು ಸಮರ್ಪಕವಾಗಿ ಶಾಲೆಗೆ ಬಾರದೆ ಮಕ್ಕಳು ಕಾಲಹರಣ ಮಾಡುತ್ತಾ ಬಿಸಿಯೂಟ ಸೇವಿಸಿ ಮನೆಯತ್ತ ಮುಖ ಮಾಡಿದ ಘಟನೆ ಸಾಮನ್ಯ ಎಂಬಂತಾಗಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿತ್ತು.
ಮಕ್ಕಳಿಗೆ ಟಿಸಿ ಕೊಟ್ಟ ಶಿಕ್ಷಕಿ : ಗ್ರಾಮಸ್ಥರು ಶಿಕ್ಷಣ ಇಲಾಖೆ , ಸ್ಥಳೀಯ ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು. ಬೆಂಗಳೂರು ನಗರ ಶಾಲೆಗೆ ಶಿಕ್ಷಕಿಯನ್ನು ನಿಯೋಜಿಸಿರುವುದನ್ನು ರದ್ದುಗೊಳಿಸುವಂತೆ ಮನವಿ ಸಲ್ಲಸಲಾಗಿತ್ತು. ಪೋಷಕರನ್ನು ಪುಸಲಾಯಿಸಿ ಏಕ ಕಾಲದಲ್ಲಿ ಎಲ್ಲರಿಗೂ ವರ್ಗಾವಣೆ ನೀಡಿ ಶಾಲೆಯನ್ನು ಶಾಶ್ವತವಾಗಿ ಮುಚ್ಚಿದ್ದಾರೆಂಬುದು ಗ್ರಾಮಸ್ಥರ ಆರೋಪವಾಗಿದೆ .
ಪ್ರಸ್ತುತ ಅರೇಹಳ್ಳಿಯ ಶಾಲೆಯ 13 ಕ್ಕೂ ಹೆಚ್ಚು ಮಕ್ಕಳು ಚಿಕ್ಕೊಂಡಹಳ್ಳಿ . ಎಚ್ ಕ್ರಾಸ್ . ನೆಲವಾಗಿಲು , ನಂದಗುಡಿ ಸರಕಾರಿ ಹಾಗೂ ಖಾಸಗಿ ಶಾಲೆಗೆ ದಾಖಲಾಗಿದ್ದು , ನಿತ್ಯ 2ರಿಂದ 8 ಕಿ.ಮೀ . ದೂರ ಪ್ರತಿ ನಿತ್ಯ ಕಾಲ್ನಡಿಗೆಯಲ್ಲಿ ವಾಹನಗಳನ್ನು ತಡೆದು ಗೊಗೆರೆದು ಶಾಲೆಗೆ ತಲುಪುವಂತಾಗಿದೆ.
ಒಂದೇ ಮಗು ಇದ್ದರೂ ಶಾಲೆ ನಡೆಸುವಂತೆ ಸರಕಾರ ಹೇಳುತ್ತಿದೆಯಾದರೂ ಅರೇಹಳ್ಳಿ ಗ್ರಾಮದಲ್ಲಿ 13 ಮಕ್ಕಳು ಶಾಲೆಗೆ ಬರಲು ಸಿದ್ಧರಿದ್ದರೂ, ವರ್ಗಾವಣೆ ಪತ್ರ ವಿತರಿಸಿ ಮಕ್ಕಳು ಬೇರೊಂದು ಶಾಲೆಗೆ ಹೋಗುವಂತಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಜಿಲ್ಲಾ ಉಪ ನಿರ್ದೇಶಕರು ಅಥವಾ ಸ್ಥಳೀಯ ಜನಪ್ರತಿನಿಧಿಗಳು ಶಾಲೆಯ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಿಸಿದ್ದಾರೆ .
ಈ ಭಾಗದಲ್ಲಿ ಖಾಸಗಿ ಶಾಲೆಗಳ ಹಾವಳಿಯಿಂದ ಸರಕಾರಿ ಶಾಲೆಗಳು ಮುಚ್ಚುವ ದುಃಸ್ಥಿತಿಗೆ ತಲುಪಿವೆ. ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ . ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳು ಇರಲಿವೆಯೇ ಎಂಬ ಆತಂಕ ಕಾಡುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಸುಸಚ್ಚಿತವಾದ ಎರಡು ಶಾಲಾ ಕೊಠಡಿ ಬಿಸಿಯೂಟದ ಅಡಿಗೆ ಮನೆ, ಶೌಚಾಲಯ ವ್ಯವಸ್ಥೆ ಇರುವ ಶಾಲೆಗೆ ವಿದ್ಯಾರ್ಥಿಗಳ ಹಾಜರಾತಿ ಇದ್ದರೂ ಕೂಡ ಶಿಕ್ಷಕರ ಗೈರು ಹಾಜರಿಯಿಂದ , ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದ ಸರಕಾರಿ ಶಾಲೆ ಮುಚ್ಚಿದ್ದರೂ , ಮತ್ತೆ ಶಾಲೆ ಆರಂಭಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಯಾವುದೇ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ ಎಂಬುದು ಪೋಷಕರ ಅಳಲಾಗಿದೆ .
ಶಾಲೆಗೆ ಹಾಜರಾಗುತ್ತಿರುವ ಮಕ್ಕಳಿಗೆ ವರ್ಗಾವಣೆ ಪತ್ರ ವಿತರಿಸಿ ಶಾಲೆಯನ್ನು ಮುಚ್ಚಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸ್ಥಳೀಯ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದು ನಾನೇ ಖುದ್ದಾಗಿ ಭೇಟಿ ನೀಡಿ ಮತ್ತೆ ಶಾಲೆಯನ್ನು ಪುನರ್ ಆರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
ಶ್ರೀಕಂಠ, ಜಿಲ್ಲಾ ಉಪನಿರ್ದೇಶಕರು, ಬೆಂ.ಗ್ರಾ. ಜಿಲ್ಲೆ