ಸುದ್ದಿಮೂಲ ವಾರ್ತೆ,
ಕಲಬುರಗಿ, ಏ.7: ನಗರದ ಮುಸ್ಲಿಂ ಚೌಕ್ನಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ನಾಸೀರ್ ಹುಸೇನ್ ಉಸ್ತಾದ್ ಮತ್ತು ಸಿಟಿ ಪೊಲೀಸ್ ಕಮಿಷನರ್ ಚೇತನ್ ಆರ್. ಮಧ್ಯೆ ವಾಗ್ವಾದ ನಡೆದಿದೆ.
ರಂಜಾನ್ ಹಿನ್ನಲೆಯಲ್ಲಿ ವ್ಯಾಪಾರಿಗಳು ಮುಸ್ಲಿಂ ಚೌಕ್ನಲ್ಲಿ ರಸ್ತೆ ಮೇಲೆ ಆಹಾರ ಸಾಮಗ್ರಿಗಳನ್ನ ಮಾರಾಟ ಮಾಡುತ್ತಿದಿದರಿಂದ, ಅಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ನೈಟ್ ರೌಂಡ್ಗೆ ತೆರಳಿದ್ದ ಸಿಟಿ ಪೊಲೀಸ್ ಕಮಿಷನರ್ ಚೇತನ್ ಆರ್ ಅವರು, ಟ್ರಾಫಿಕ್ ಜಾಮ್ ಕಂಡು ತಕ್ಷಣ ವ್ಯಾಪಾರಸ್ಥರನ್ನು ರಸ್ತೆ ಮೇಲಿನ ಸಾಮಗ್ರಿಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ.
ಇದೆ ವೇಳೆ ಸ್ಥಳಕ್ಕೆ ಬಂದ ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಉಸ್ತಾದ್, ರಂಜಾನ್ ಸಂದರ್ಭದಲ್ಲಿ ಹೀಗೆ ಮಳಿಗೆ ಹಾಕುವುದು ಮೊದಲಿನಿಂದಲೂ ರೂಢಿಯಲ್ಲಿದೆ ಹೇಳಿದ್ದಾರೆ.ಇದಕ್ಕೆ ಗರಂ ಆದ ಕಮಿಷನರ್ ಚೇತನ್ ಅವರು,ನೀವು 50 ಬಾರಿ ಮಳಿಗೆ ಹಾಕಿರಬಹುದು. 51ನೇ ಬಾರಿ ಹಾಕಲು ಅವಕಾಶವಿಲ್ಲ ಎಂದು ಏಕವಚನದಲ್ಲೆ ನಾಸೀರ್ ಹುಸೇನ್ ಅವರನ್ನು
ತರಾಟೆಗೆ ತೆಗೆದುಕೊಂಡಿದ್ದಾರೆ.
ಕಮಿಷನರ್ ಮಾತಿಗೆ ಕೆರಳಿದ ನಾಸೀರ್ ಹುಸೇನ್ ಮತ್ತು ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ.ಪ್ರತಿಭಟನೆ ನಡೆಸಿದ ನಾಸೀರ್ ಹುಸೇನ್ ಉಸ್ತಾದ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ.