ಸುದ್ದಿಮೂಲ ವಾರ್ತೆ
ಮೈಸೂರು,ಸೆ.6:ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಡುಗೆಗಳ ಬಗ್ಗೆ ಪ್ರಶ್ನಿಸಿದ್ದ ಹಿನ್ನೆಲೆಯಲ್ಲಿ ಬಹಿರಂಗ ಚರ್ಚೆಗೆ ಸವಾಲೊಡ್ಡಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಚೇರಿಗೆ ಬುಧವಾರ ನುಗ್ಗಲು ಯತ್ನಿಸಿದರು.
ಇದನ್ನು ತಡೆಯಲು ಯತ್ನಿಸಿದ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪ್ರತಾಪ್ ಸಿಂಹ, ಮೈಸೂರಿಗೆ ಸಿದ್ದರಾಮಯ್ಯನವರ ಕೊಡುಗೆಗಳ ಬಗ್ಗೆ ಪ್ರಶ್ನೆ ಮಾಡಿದ್ದ ಕಾರಣ ಕೆಪಿಸಿಸಿ ವಕ್ತಾರ ಎಂ ಲಕ್ಶ್ಮಣ್, ಸೆ. 6ರಂದು ಪ್ರತಾಪ್ ಸಿಂಹ ಕಚೇರಿ ಮುಂಭಾಗ ದಾಖಲೆ ಬಿಡುಗಡೆ ಮಾಡಲಾಗುವುದು, ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದರು. ಅದರಂತೆ ಎಂ.ಲಕ್ಷ್ಮಣ್ ದಾಖಲೆ ಸಮೇತ ಪ್ರತಾಪ್ ಸಿಂಹ ಕಚೇರಿಗೆ ಆಗಮಿಸಿದ್ದು, ಈ ವೇಳೆ ಹೈಡ್ರಾಮಾ ನಡೆಯಿತು.
ಆದರೆ ಪೊಲೀಸರು ಎಂ.ಲಕ್ಷ್ಮಣ್ ಅವರನ್ನ ಕಚೇರಿಯೊಳಗೆ ಬಿಡದೇ ತಡೆದರು. ಲಕ್ಷ್ಮಣ್ ನಿಂತಿದ್ದರು. ಸ್ಥಳೀಯ ಕಾಂಗ್ರೆಸ್ ಮುಖಂಡರು ಲಕ್ಷ್ಮಣ್ಗೆ ಸಾಥ್ ನೀಡಿದರು. ಬಳಿಕ ಮಾತನಾಡಿದ ಲಕ್ಷ್ಮಣ್, ಮೈಸೂರಿಗೆ ಪ್ರತಾಪ್ ಸಿಂಹ ನಯಾಪೈಸೆ ಕೆಲಸ ಮಾಡಿಲ್ಲ. ಅವರದ್ದೇ ಬಿಜೆಪಿ ಸರ್ಕಾರ ಇತ್ತು. ಅವರ ವಿಶ್ವಗುರು ಪ್ರಧಾನಿ ಆಗಿದ್ದರು. ಸಂಸದರಾಗಿ ಪ್ರತಾಪ್ ಸಿಂಹ ನೀವೇನು ಕೊಟ್ಟಿದ್ದೀರಿ ರಿಂಗ್ ರೋಡ್ ಆಗಿದ್ದು ಎಡಿಬಿ ಸಾಲದಲ್ಲಿ. ಕಾರ್ಪೊರೇಟರ್ ಮಾಡಿದ್ದನ್ನು ನಾನು ಮಾಡಿದ್ದೇನೆ ಅಂತ ಹೇಳಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.