ಸುದ್ದಿಮೂಲ ವಾರ್ತೆ
ರಾಮನಗರ, ಜು 6 : ಜಿಲ್ಲಾ ಕೇಂದ್ರ ರಾಮನಗರದ ಮೂಲಕ ಹರಿಯುತ್ತಿರುವ ಅರ್ಕಾವತಿ ನದಿ ನೀರು ರಾಸಾಯನಿಕಗಳಿಂದ ಕಲುಷಿತಗೊಂಡಿರುವ ಹಿನ್ನೆಲೆಯಲ್ಲಿ ಜುಲೈ 6 ರಿಂದ 2 ದಿನಗಳ ಕಾಲ ಅರ್ಕಾವತಿ ನದಿ ನೀರು ಸರಬರಾಜು ಸ್ಥಗಿತಗೊಳಿಸಿರುವುದಾಗಿ ಜಲಮಂಡಳಿ ಪ್ರಕಟಿಸಿದೆ.
ನದಿ ನೀರು ಕಲುಷಿತಗೊಳ್ಳಲು ಕಾರಣವಾದ ಕೋಳಿ ಸಾಗಾಣಿಕ ಘಟಕದ ವಿರುದ್ದ ಜಲಮಂಡಳಿ ಅಧಿಕಾರಿಗಳು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ನಗರಸಭಾ ವ್ಯಾಪ್ತಿಯಲ್ಲಿ 1 ರಿಂದ 10ನೇ ವಾರ್ಡುಗಳಿಗೆ ಅರ್ಕಾವತಿ ನದಿ ನೀರು ಸರಬರಾಜು ಆಗುತ್ತಿದ್ದು, ಈ ವಾರ್ಡುಗಳಲ್ಲಿ ನೀರು ಸರಬರಾಜು ವ್ಯತ್ಯಯವಾಗಲಿದೆ. ಅರ್ಕಾವತಿ ನದಿ ಮೂಲದಿಂದ ಶುದ್ಧೀಕೃತ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ, ಅರ್ಕಾವತಿ ನದಿಯಲ್ಲಿ ಕಲುಷಿತ ನೀರು ಹರಿಯುತ್ತಿರುವುದರಿಂದ ಮುನ್ನೆಚ್ಚರಿಕೆಯಾಗಿ ಜು.5 ರಿಂದ ದ್ಯಾವರಸೇಗೌಡನದೊಡ್ಡಿ ಪಂಪ್ ಹೌಸ್ನಿಂದ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಕಾವತಿ ನದಿ ಮೇಲ್ಬಾಗದ ಸುಮಾರು 2 ಕಿ.ಮೀ ಆಚೆ ಖಾಸಗಿ ಕೋಳಿ ಸಾಕಾಣಿಕೆ ಘಟಕದಿಂದ (ತಿಬ್ಬೇಗೌಡನದೊಡ್ಡಿ ಗೇಟ್ನಿಂದ ಮುಂದೆ ಶ್ರೀ ಮುನೇಶ್ವರ ದೇವಸ್ಥಾನದ ಬಳಿ ಇರುವ ನದಿ ದಂಡೆಯಲ್ಲಿ) ರಾಸಾಯನಿಕ ಹಾಗೂ ಇತರ ತ್ಯಾಜ್ಯ ಪದಾರ್ಥಗಳನ್ನು ನದಿ ಪಾತ್ರಕ್ಕೆ ಬಿಟ್ಟಿರುವುದರಿಂದ ನೀರು ಕಲುಷಿತಗೊಂಡಿದೆ. ಹೀಗಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರಿಗೆ ದೂರು
ನದಿ ನೀರನ್ನು ಕಲುಷಿತಗೊಳಿಸಿರುವ ಹಿನ್ನೆಲೆಯಲ್ಲಿ ಜಲಮಂಡಳಿಯ ಚನ್ನಪಟ್ಟಣ ಉಪವಿಬಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರಾಮಾಂತರ ಆರಕ್ಷಕ ಠಾಣೆಗೆ ದೂರನ್ನು ಸಹ ದಾಖಲಿಸಿದ್ದು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.