ಕಾವೇರಿ ನೀರು ಬಿಡುವುದಿಲ್ಲ ಎಂದು ಹೇಳುತ್ತಲೆ ಕದ್ದು ಮುಚ್ಚಿ ನೀರು ಬಿಡುತ್ತಿರುವ ವಚನಭ್ರಷ್ಟ ಸರ್ಕಾರ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ರವರ ನೇತೃತ್ವದಲ್ಲಿ ಮೈಸೂರು ನಗರದ ಗ್ರಾಮಾಂತರ ಬಸ್ ನಿಲ್ದಾಣದ ಮುಂದೆ ದಿಢೀರನೆ ರಸ್ತೆ ತಡೆದು ಸರ್ಕಾರದ ವಿರುದ್ಧ ಧಿಕ್ಕಾರವನ್ನು ಕೂಗುತ್ತಾ ಆಕ್ರೋಶ ಹೊರ ಹಾಕಿದರು.
ಅಯ್ಯಯ್ಯೋ ಅನ್ಯಾಯ ಕಾವೇರಿ ನಮ್ಮದು ಉಳಿಯಲಿ ಉಳಿಯಲಿ ನೀರು ಉಳಿಯಲಿ ರೈತ ದ್ರೋಹಿ ಸರ್ಕಾರಕ್ಕೆ ದಿಕ್ಕಾರ ವಚನಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಾ ರಸ್ತೆಗೆ ಅಡ್ಡಲಾಗಿ ನಿಂತು ಪ್ರತಿಭಟನೆ ಮಾಡಿದರು. ಸಾವಿರಾರು ವಾಹನಗಳು ರಸ್ತೆಯಲ್ಲಿ ನಿಂತು ಸಂಚಾರ ಅಸ್ತವ್ಯಸ್ತಗೊಂಡ ಕಾರಣ ಬಿಗುವಿನ ವಾತಾವರಣ ಏರ್ಪಟ್ಟಿತು .
ಈ ವೇಳೆ ಡಿಕೆಶಿ ಭಾವಚಿತ್ರಕ್ಕ ಬೆಂಕಿ ಹಚ್ಚಲಾಯಿತು. ರಸ್ತೆ ತಡೆ ತೆರವುಗೊಳಿಸುವಂತೆ ರೈತರನ್ನು ಮನವೊಲಿಸಲು ಪೊಲೀಸರು ಮುಂದಾದರು. ಇದಕ್ಕೆ ರೈತರು ಜಗ್ಗದೆ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ರೈತರು ಪೊಲೀಸರ ವಿರುದ್ಧ ತಿರುಗಿ ಬಿದ್ದಾಗ ಚಳುವಳಿ ನಿರತ ರೈತರನ್ನು ಬಂಧಿಸಿ ಮೈಸೂರಿನ ಸಿಎಆರ್ ಮೈದಾನಕ್ಕೆ ಕರೆದೊಯ್ದುರು ನಂತರ ಬಿಡುಗಡೆಗೊಳಿಸಿದರು
ಕತ್ತೆಗಳೊಂದಿಗೆ ಮೆರವಣಿಗೆ
ಮಂಡ್ಯ ನಗರದ ರೈತ ಸಂಘದಿಂದ ಸಂಜಯ ವೃತ್ತದಲ್ಲಿ ಬೆಂ-ಮೈ ಹೆದ್ದಾರಿ ತಡೆದ ಅನ್ನದಾತರು, ಕತ್ತೆಗಳೊಂದಿಗೆ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿ, ಸರ್ಕಾರಗಳು, ಪ್ರಾಧಿಕಾರವನ್ನು ಕತ್ತೆಗಳಿಗೆ ಹೋಲಿಸಿ ಅಣಕಿಸಿದರು.
ಮೂರು ಕತ್ತೆಗಳನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಪ್ರಾಧಿಕಾರಕ್ಕೆ ಹೋಲಿಸಿ ಕತ್ತೆಗಳಿಗೇನು ಗೊತ್ತು ಕಸ್ತೂರಿ ವಾಸನೆ, ಕತ್ತೆಗೇನು ಗೊತ್ತು ಕಾವೇರಿಯ ವಾಸ್ತವ ಸ್ಥಿತಿ ಎಂದು ಅಣಕವಾಡುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಗುಳೆ ಹೋಗುವ ಪ್ರತಿಭಟನೆ
ಶ್ರೀರಂಗಪಟ್ಟಣದಲ್ಲಿ ರೈತರು ‘ಗುಳೇ ಹೋಗುವ ಪ್ರತಿಭಟನೆ’ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಭೂಮಿ ತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಹಾಗೂ ಸಮಿತಿಯ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ಪಟ್ಟಣದ ಸ್ನಾನಘಟ್ಟ ಬಳಿಯ ಕಾವೇರಿ ನದಿ ತೀರದಲ್ಲಿ ಗುಳೇ ಹೋಗುವ ಪ್ರತಿಭಟನೆ ನಡೆಸಿ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಕಾವೇರಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ತಾಲ್ಲೂಕು ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಬಳಿಕ ತಾಲ್ಲೂಕು ಕಚೇರಿ ಎದುರು ಸುಮಾರು ಒಂದು ಗಂಟೆಗೂ ಅಧಿಕ ಸಮಯ ಪ್ರತಿಭಟನೆ ನಡೆಸಿ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಖಾಲಿ ಕೊಡಗಳ ಪ್ರದರ್ಶನ
ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ನಗರ ಜಿಲ್ಲಾಡಳಿತ ಭವನದ ಮುಖ್ಯಗೇಟ್ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಖಾಲಿ ಕೊಡಗಳನ್ನು ಪ್ರದರ್ಶನ ಮಾಡಿ ತಮಿಳುನಾಡು, ಕರ್ನಾಟಕ ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರ೦.ಶ್ರೀನಿವಾಸ ಗೌಡ, ನಿಜಧ್ವನಿ ಗೋವಿಂದರಾಜು, ಪಣ್ಯದಹುಂಡಿ ರಾಜು, ಚಾ.ರಾ.ಕುಮಾರ್, ಅರುಣ್ ಕುಮಾರ್, ಮಹೇಶ್ ಗೌಡ, ರವಿಚಂದ್ರಪ್ರಸಾದ್ ಕಹಳೆ, ಲಿಂಗರಾಜು, ನಂಜುಂಡಸ್ವಾಮಿ, ಚಾ.ಹ.ರಾಮು, ವೀರಭದ್ರ, ತಾಂಡವಮೂರ್ತಿ, ದೊರೆ, ಆಟೋ ಸುರೇಶ್ ಇತರರು ಭಾಗವಹಿಸಿದ್ದರು.