ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ 24: ನಗರದ ಜಯಮಹಲ್ ಪ್ಯಾಲೇಸ್ ನಲ್ಲಿ ನಡೆಯುತ್ತಿರುವ ಬೆಂಗಳೂರು ದಸ್ತಕರ್ ಬಜಾರ್ ಮೇಳದಲ್ಲಿ ಬಂಜಾರ ಕಸೂತಿ ವಿಭಾಗದ ವಸ್ತ್ರ ವೈಭವ ಗಮನ ಸೆಳೆಯುತ್ತಿದೆ.
ನಶಿಸುತ್ತಿರುವ ಬಂಜಾರ ಸಮುದಾಯದ ಶ್ರೀಮಂತ ಸಂಸ್ಕೃತಿ, ಉಡುಗೆ ತೊಡುಗೆಗಳನ್ನು ಉಳಿಸಿ ಬೆಳೆಸುವ ಮತ್ತು ಬಂಜಾರ ಜನಾಂಗದ ಜೀವನೋಪಾಯದ ಉದ್ದೇಶದಿಂದ ಸಚಿವ ಎಂ.ಬಿ. ಪಾಟೀಲ್ ಅವರ ಪತ್ನಿ ಆಶಾ ಪಾಟೀಲ್ ಬಂಜಾರ ಕಸೂತಿ ಸ್ವಯಂ ಸೇವಾ ಸಂಘ ಸ್ಥಾಪಿಸಿದ್ದಾರೆ. ಬಂಜಾರ ಕಲೆಗೆ ಆಧುನಿಕ ಸ್ಪರ್ಷ ನೀಡುವ ನಿಟ್ಟಿನಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಆಶಾ ಪಾಟೀಲ್, ಬಂಜಾರ ಸಮುದಾಯದ ಗಾಗ್ರಾಚೋಲಿ ಮತ್ತಿತರ ವಸ್ತ್ರಗಳನ್ನು ದಿನನಿತ್ಯ ತೊಡಲು ಸಾಧ್ಯವಿಲ್ಲ. ಹೀಗಾಗಿ ಖಾದಿ ವಸ್ತ್ರಕ್ಕೆ ಬಂಜಾರ ಉಡುಪಿನ ಸ್ಪರ್ಷ ನೀಡಲಾಗಿದೆ. ಲಂಬಾಣಿ ಸಮುದಾಯ ಅತ್ಯಂತ ಶ್ರೀಮಂತ ಸಂಸ್ಕೃತಿ ಹೊಂದಿದ್ದು, ಆಭರಣ, ವಸ್ತ್ರಗಳಲ್ಲಿ ವಿಶೇಷ ಸಂಪ್ರದಾಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಲಂಬಾಣಿ ಜನಾಂಗದ ಕಸೂತಿ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದೆ. ಉಡುಪುಗಳಲ್ಲಿ ನಾವಿನ್ಯತೆಯ ಮೆರಗು ಇದ್ದು, ಬೆರಗುಗೊಳಿಸುವ ಆಯ್ಕೆಗಳಿಗೆ ಅವಕಾಶಗಳಿವೆ. ಅಂತರರಾಷ್ಟ್ರೀಯ ಮಟ್ಟದ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಿ ಜಾಗತಿಕ ಮಟ್ಟಕ್ಕೆ ವಸ್ತ್ರ ವಿನ್ಯಾಸಗಳನ್ನು ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದರು.
ಮೇ. 23 ರಿಂದ ದಸ್ತಕರ್ ಬಜಾರ್ ಪ್ರದರ್ಶನ ಮತ್ತು ಮಾರಾಟ ಮೇಳ ಆರಂಭವಾಗಿದ್ದು, ಇದೇ 29 ರ ವರೆಗೆ ಸಾರ್ವಜನಿಕರಿಗೆ 25 ರಾಜ್ಯಗಳ 150ಕ್ಕೂ ಹೆಚ್ಚು ಕುಶಲ ಕರ್ಮಿಗಳು ಭಾಗವಹಿಸಿದ್ದಾರೆ.