ಸುದ್ದಿಮೂಲ ವಾರ್ತೆ
ಮೈಸೂರು, ಜು.14:ಚಾಮುಂಡಿಬೆಟ್ಟದಲ್ಲಿ ಕೊನೆಯ ಆಷಾಢ ಶುಕ್ರವಾರದ ಪ್ರಯುಕ್ತ ಸಡಗರ ಸಂಭ್ರಮ ಮನೆ ಮಾಡಿತ್ತು.ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಿ ಸನ್ನಿಧಾನಕ್ಕೆ ಭಕ್ತ ಸಾಗರ ಹರಿದುಬಂದಿತ್ತು, ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಭಕ್ತರು ದರ್ಶನ ಪಡೆದರು.
ಮುಂಜಾನೆ 3.30ಕ್ಕೆ ಪೂಜಾ ಕೈಂಕರ್ಯಗಳು ಆರಂಭವಾದವು. ಮಹಾ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ದೇವಸ್ಥಾನದ ಪ್ರಾಂಗಣವನ್ನು ನಾನಾ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಸುತ್ತೂರು ಶ್ರೀಗಳಿಂದ ಪ್ರಸಾದ ವಿತರಣೆ
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಭಕ್ತರಿಗೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಪ್ರಸಾದ ವಿತರಿಸಿದರು. ಆಷಾಡ ಮಾಸದ ಕೊನೆ ಶುಕ್ರವಾರದ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಮಾಡುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳಿತು ಮಾಡಲಿ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಹೇಳಿದರು