ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 09: ರಾಜ್ಯದಲ್ಲಿ ಮಳೆ ಮತ್ತೆ ಶುರುವಾಗಿದೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ರಾಜಧಾನಿ ಬಿಟ್ಟೂ ಬಿಡದೆ ಮಳೆ ಸುರಿದಿದೆ. ಸಂಜೆ ಸುರಿದ ಭಾರಿ ಮಳೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಸವಾರರು ಪರದಾಡಬೇಕಾಯಿತು.
ಇತ್ತ ಮೈಸೂರಿನಲ್ಲೂ ಮಳೆ ಆರ್ಭಟ ಜೋರಾಗಿತ್ತು. ಸತತ ಒಂದೂವರೆ ಗಂಟೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನ- ಜೀವನ ಅಸ್ತವ್ಯಸ್ತವಾಗಿತ್ತು. ರಸ್ತೆಗಳಲ್ಲಿ ಮಳೆ ನೀರು ನದಿಯಂತೆ ಹರಿಯುತ್ತಿತ್ತು. ದಿಢೀರ್ ಮಳೆಯಿಂದಾಗಿ ಜನರು ಬಸ್ ನಿಲ್ದಾಣಗಳ ಮೊರೆ ಹೋಗಿದ್ದರು.
ಮೂರು ದಿನ ಮಳೆ
ಸೋಮವಾರ ತಮಿಳುನಾಡು ಮೂಲಕ ಕನ್ಯಾಕುಮಾರಿವರೆಗೆ ಸಮುದ್ರ ಮಟ್ಟದಲ್ಲಿ ಟ್ರಫ್ ಎದ್ದಿದೆ. ಇದರ ಪ್ರಭಾವದಿಂದಾಗಿ ದಕ್ಷಿಣ ಒಳನಾಡಲ್ಲಿ ಇನ್ನು ಮೂರು ದಿನಗಳು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಹಾಸನ , ಮಂಡ್ಯ, ಕೋಲಾರ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.