ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.21: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಗಾಯತ್ರೀದೇವಿ ಪಾರ್ಕ್ ಬಡಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಹಾಲಿ ಶಾಸಕ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಶುಕ್ರವಾರ ಲವಲವಿಕೆಯಿಂದ ಪಾದಯಾತ್ರೆ ಮಾಡಿ, ಚುನಾವಣೆ ಅಖಾಡದಲ್ಲಿ ರಂಗೇರಿಸಿದರು.
ಬೆಳಿಗ್ಗೆ ಜನರು ವಾಯುವಿಹಾರದ ಲಹರಿಯಲ್ಲಿ ಇದ್ದಾಗಲೇ ಬಡಾವಣೆಯಲ್ಲಿ ಪ್ರತ್ಯಕ್ಷರಾದ ಅವರು, ಪ್ರದೇಶದ ಎಲ್ಲ ರಸ್ತೆಗಳ ಮನೆಮನೆಗೂ ಖುದ್ದಾಗಿ ತೆರಳಿ, ನಾಲ್ಕನೇ ಬಾರಿಗೆ ತಮಗೆ ಆಶೀರ್ವದಿಸುವಂತೆ ಪ್ರಾರ್ಥಿಸಿದರು.
ಬಡಾವಣೆಯ ಇಕ್ಕೆಲಗಳಲ್ಲೂ ಆಬಾಲವೃದ್ಧರಾದಿಯಾಗಿ ಜನರು ತಮ್ಮ ಮನೆಗಳ ಮುಂದೆ ಸಾಲುಗಟ್ಟಿ ನಿಂತು, ಅವರನ್ನು ಸ್ವಾಗತಿಸಿದರು. ಹಲವೆಡೆಗಳಲ್ಲಿ ಶಾಸಕರ ಕೈ ಕುಲುಕಿದ ಮಕ್ಕಳು, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದವು. ಹಾಗೆಯೇ ಹಲವು ಸ್ಥಳಗಳಲ್ಲಿ ಅವರಿಗೆ ಪುಷ್ಪಮಾಲೆ ಹಾಕಿ, ಹರಸಿದರು.
ಸಾರ್ವಜನಿಕರು ಈಗಾಗಲೇ ಮಲ್ಲೇಶ್ವರದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ , ಬಡಾವಣೆ ಯಲ್ಲಿ ಇನ್ನೂ ಆಗಬೇಕಿರುವ ಕೆಲಸಗಳ ಬಗ್ಗೆ ಕೇಳಿ ತಿಳಿದುಕೊಂಡರು.
ಜತೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು, ಪಾದಯಾತ್ರೆಯ ಉದ್ದಕ್ಕೂ ಬಿಜೆಪಿ ಪರವಾಗಿ ತಾರಕ ಸ್ವರದಿಂದ ಜಯಘೋಷಗಳನ್ನು ಹಾಕುತ್ತಿದ್ದರು.