ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.13: ಶಾಸಕ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಅವರು ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯ ವೈಯಾಲಿಕಾವಲ್, ಕೋದಂಡರಾಂಪುರ ಹಾಗೂ 3, 4 ಮತ್ತು 5ನೇ ಮುಖ್ಯರಸ್ತೆಗಳಲ್ಲಿ ಬುಧವಾರ ಪಾದಯಾತ್ರೆ ಮಾಡಿ, ಮತಯಾಚಿಸಿದರು.
ಪಾದಯಾತ್ರೆ ಮಧ್ಯೆ ಗಣಪತಿ ದೇವಸ್ಥಾನಕ್ಕೂ ಭೇಟಿ ನೀಡಿದ ಅವರು, ಅಲ್ಲಿ ಪೂಜೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಈ ವೇಳೆ ಕಾರ್ಯಕರ್ತರು ಮತ್ತು ಬೂತ್ ಮಟ್ಟದ ಮುಖಂಡರ ಜತೆ ಮನೆಮನೆಗೂ ಭೇಟಿ ನೀಡಿದರು.
ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿ ವಿರುದ್ಧ ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮತ್ತು ಆಧಾರರಹಿತ ಆರೋಪ ಮಾಡುತ್ತಿವೆ. ನಂದಿನಿ ಮತ್ತು ಅಮೂಲ್ ವಿಚಾರದಲ್ಲಿ ಅವು ಆಡುತ್ತಿರುವ ಮಾತುಗಳೇ ಇದಕ್ಕೆ ಉದಾಹರಣೆಯಾಗಿದೆ ಎಂದು ಅವರು ಟೀಕಿಸಿದರು.
ಕೆಎಂಎಫ್ ಸಂಸ್ಥೆಯನ್ನು ರೈತಪರವನ್ನಾಗಿ ಮಾಡಿ, ಒಂದು ಲೀಟರ್ ಹಾಲಿಗೆ ಐದು ರೂಪಾಯಿ ಸಹಾಯಧನ ನೀಡುವುದನ್ನು ಆರಂಭಿಸಿದ ಕೀರ್ತಿ ಯಡಿಯೂರಪ್ಪ ನವರಿಗೆ ಸಲ್ಲಬೇಕು. ಕೋವಿಡ್ ಸಮಯದಲ್ಲಿ ಕೂಡ ನಮ್ಮ ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆ ಸುಸ್ಥಿರವಾಗಿ ಇರುವಂತೆ ನೋಡಿಕೊಂಡಿತು ಎಂದು ಅವರು ಪ್ರತಿಪಾದಿಸಿದರು.
ಮಾರುಕಟ್ಟೆಯಲ್ಲಿ ಐವತ್ತು ತರಹದ ಹಾಲಿನ ಬ್ರ್ಯಾಂಡ್ ಗಳು ಲಭ್ಯವಿವೆ. ಹೀಗಿರುವಾಗ ಅಮೂಲ್ ವಿರುದ್ಧ ಮಾತ್ರ ಅಪಸ್ವರ ತೆಗೆಯುತ್ತಿರುವುದರ ಹಿಂದೆ ರಾಜಕೀಯ ಲಾಭದ ಆಸೆ ಇದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಗಳ ಈ ವರ್ತನೆ ಖಂಡನೀಯ ಎಂದು ಅಶ್ವತ್ಥನಾರಾಯಣ ಕಿಡಿ ಕಾರಿದರು.