ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.22: ದೇಶದ ಬಗ್ಗೆ ಕಾಳಜಿ ಇರುವ ಬಿಜೆಪಿ ಭಾರತೀಯರ ಪಕ್ಷವಾಗಿದೆ. ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ಇಂಪೋರ್ಟೆಡ್ ಪಕ್ಷವಾಗಿದೆ ಎಂದು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಕುಟುಕಿದ್ದಾರೆ.
ಸುಬ್ರಹ್ಮಣ್ಯ ನಗರದ ‘ಇ’ ಬ್ಲಾಕ್ನ ಹಲವೆಡೆಗಳಲ್ಲಿ ಅವರು ಶನಿವಾರ ಬೆಳಿಗ್ಗೆ ಮನೆಮನೆಗೆ ತೆರಳಿ ಮತ ಯಾಚನೆ ಮಾಡಿ, ಮಾತನಾಡಿದರು.
ಬಿಜೆಪಿ ನಿಜವಾದ ಅರ್ಥದಲ್ಲಿ ಜನರಿಗೆ ಸ್ಪಂದಿಸುತ್ತಿದೆ. ಮಲ್ಲೇಶ್ವರ ಕ್ಷೇತ್ರವನ್ನು ಜಗತ್ತಿನಲ್ಲೇ ಮಾದರಿ ಕ್ಷೇತ್ರವೆನ್ನುವಂತೆ ಅಭಿವೃದ್ಧಿ ಪಡಿಸುವುದು ತಮ್ಮ ಕನಸಾಗಿದೆ ಎಂದು ಅವರು ಭರವಸೆ ನೀಡಿದರು.
ಕೋವಿಡ್ ನಂತರ ತಂತ್ರಜ್ಞಾನದ ಬಳಕೆ ಮುಂಚೂಣಿಗೆ ಬಂದಿದೆ. ನಗರ ನಿರ್ಮಾಣದ ವಿಧಾನವೂ ಈಗ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರನ್ನು ಎಲ್ಲ ವರ್ಗಗಳ ಜನರ ಕೈಗೂ ಎಟುಕುವಂತಹ ನಗರವನ್ನಾಗಿ ರೂಪಿಸುವುದು ಬಿಜೆಪಿಯ ಹೆಬ್ಬಯಕೆಯಾಗಿದೆ ಎಂದು ಅವರು ನುಡಿದರು.
ಬಿಜೆಪಿಯು ಕೋವಿಡ್ ನಿರ್ವಹಣೆ, ಗಡಿ ಸುರಕ್ಷೆ, ಕುಡಿಯುವ ನೀರು, ಶೌಚಾಲಯ, ಶಿಕ್ಷಣ, ಹೂಡಿಕೆ, ಉದ್ಯಮಶೀಲತೆ ಹೀಗೆ ಎಲ್ಲದರಲ್ಲೂ ಸಮಗ್ರ ಪ್ರಗತಿಯನ್ನು ಸಾಧಿಸುವಂತಹ ಯೋಜನೆಗಳನ್ನು ರೂಪಿಸಿದೆ. ಉಳಿದ ಪಕ್ಷಗಳಿಗೆ ಇಂತಹ ಒಂದು ಸಣ್ಣ ಕಲ್ಪನೆಯೂ ಇಲ್ಲ ಎಂದು ಅವರು ಟೀಕಿಸಿದರು.
ಪಾದಯಾತ್ರೆಯ ಉದ್ದಕ್ಕೂ ಭಾರತ್ ಮಾತಾ ಕೀ ಜೈ, ವೋಟು ಕೊಡಿ ವೋಟು ಕೊಡಿ-ಬಿಜೆಪಿಗೆ ವೋಟು ಕೊಡಿ, ಬರ್ತಾರಣ್ಣ ಬರ್ತಾರೆ-ಅಶ್ವತ್ಥಣ್ಣ ಬರ್ತಾರೆ ಮುಂತಾದ ಘೋಷಣೆಗಳು ಮೊಳಗಿದವು.
ಬಿಜೆಪಿ ಮುಖಂಡರಾದ ಪಾಲಿಕೆ ಮಾಜಿ ಸದಸ್ಯ ಮಂಜುನಾಥ, ವಾರ್ಡ್ ಅಧ್ಯಕ್ಷ ಯೋಗೇಶ ಸೇರಿದಂತೆ ಇತರರು ಇದ್ದರು.