ಸುದ್ದಿಮೂಲ ವಾರ್ತೆ
ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ವೈಯಾಲಿಕಾವಲ್ ಪ್ರದೇಶದ ಭುವನೇಶ್ವರಿ ನಗರದಲ್ಲಿ ಶುಕ್ರವಾರ ಮನೆಮನೆಗೆ ಭೇಟಿ ನೀಡಿ, ಬಿಜೆಪಿ ಪರವಾಗಿ ಮತ ಕೋರಿದರು.
ಬೆಳಿಗ್ಗೆ ನೂರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳ ಜತೆ ಪಾದಯಾತ್ರೆ ಹೊರಟ ಅವರು, ಬೀದಿಯ ಎರಡು ಬದಿಗಳಲ್ಲೂ ಸಾಲುಗಟ್ಟಿ ನಿಂತಿದ್ದ ಮತದಾರರಿಗೆ ಕೈ ಮುಗಿಯುತ್ತ ಹೆಜ್ಜೆ ಇಟ್ಟರು.
ಮಧ್ಯದಲ್ಲಿ ಹಲವು ಅಭಿಮಾನಿಗಳು ಅವರನ್ನು ನಿಲ್ಲಿಸಿಕೊಂಡು, ಶಾಲು ಮತ್ತು ಹಾರ ಹಾಕಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ಕೆಲವೆಡೆಗಳಲ್ಲಿ ಮಹಿಳೆಯರು ಅವರಿಗೆ ಆರತಿ ಎತ್ತಿ, ಹರಸಿದ್ದು ಕೂಡ ಕಂಡುಬಂತು.
ಮೆರವಣಿಗೆಯ ಉದ್ದಕ್ಕೂ ಕಾರ್ಯಕರ್ತರು ಬಿಜೆಪಿ ಮುಗಿಲು ಮುಟ್ಟುವ ರೀತಿಯಲ್ಲಿ ಜಯಘೋಷ ಹಾಕುತ್ತಿದ್ದರು.