ಸುದ್ದಿಮೂಲ ವಾರ್ತೆ
ತುಮಕೂರು, ಏ.2: ನ್ಯಾಯಾಲಯಗಳಲ್ಲಿರುವ ಹಳೇ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ವಕೀಲರು ನ್ಯಾಯಾಧೀಶರೊಂದಿಗೆ ಸಹಕರಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೇ ಹೇಳಿದರು.
ಇಂದು ನಗರದ ನ್ಯಾಯಾಲಯದಲ್ಲಿ ಹೊಸ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿ, ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ. ಹಿರಿಯ ನ್ಯಾಯವಾದಿಗಳು ಕಿರಿಯ ನ್ಯಾಯಾಧೀಶರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ರಾಜ್ಯ ಸರ್ಕಾರದಿಂದ ಅನುದಾನ ನೀಡುತ್ತಿದೆ. ಅದು ಸಂವಿಧಾನಾತ್ಮಕ ಕರ್ತವ್ಯ ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆಧುನೀಕರಣಗೊಳಿಸಲಾಗಿದೆ. ಜೊತೆಗೆ ನ್ಯಾಯಾಧೀಶರಿಗೆ, ಕಕ್ಷಿದಾರರಿಗೆ, ವಕೀಲರಿಗೆ ಭದ್ರತೆ ಕೂಡ ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.
ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಸರ್ಕಾರ ಮಾಹಿತಿ ತಂತ್ರಜ್ಞಾನ ಸೌಲಭ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು. ಈಚಿನ ದಿನಗಳಲ್ಲಿ ಇ ಫೈಲಿಂಗ್ ನಿಂದ ಹಿಡಿದು ಹೊಸ ಅನುಕೂಲ ಮಾಡಿಕೊಡಲಾಗುತ್ತಿದೆ. ನಾವು ತಂತ್ರಜ್ಞಾನದಲ್ಲಿ ನಿಪುಣರಾಗಬೇಕು. ಹೊಸ ತಂತ್ರಜ್ಞಾನವನ್ನು ಯಾವುದೇ ಮಾರ್ಗದಲ್ಲಿಯಾದರೂ ಕರಗತಗೊಳಿಸಿಕೊಳ್ಳಬೇಕು. ಹೊಸದಲ್ಲಿ ಕೊಂಚ ತೊಂದರೆ ಇರಬಹುದು. ಆದರೆ, ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂದರು.
ಸಾಮಾನ್ಯ ಜನರು ನ್ಯಾಯಾಲಯದ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸಬಾರದು. ಎಲ್ಲಾ ಕಕ್ಷಿದಾರರು ನ್ಯಾಯಾಲಯದ ಮೇಲೆ ವಿಶ್ವಾಸವನ್ನು ಇಡಬೇಕಾಗಿದೆ ಎಂದರು.
ನ್ಯಾಯಮೂರ್ತಿ ವೀರಪ್ಪ ಮಾತನಾಡಿ, ಕೋಲಾರ ಜಿಲ್ಲೆಯಿಂದ ಬೈರಾರೆಡ್ಡಿ, ಸುಧೀಂದ್ರರಾವ್ ಅಂತಹ ಹೈಕೋರ್ಟಿನ ನ್ಯಾಯಮೂರ್ತಿಗಳು ಬಂದಿದ್ದಾರೆ. ಸುಧೀಂದ್ರರಾವ್ ಅವರು ಆಡಳಿತದಲ್ಲಿದ್ದ ಮುಖ್ಯಮಂತ್ರಿಯನ್ನೇ ಜೈಲಿಗೆ ಕಳಿಸುವ ತಾಕತ್ತು ತೋರಿಸಿದರು. ಇದು ನ್ಯಾಯಾಧೀಶರ ಬದ್ಧತೆಯನ್ನು ತೋರಿಸುತ್ತದೆ ಎಂದರು.
ಸರ್ಕಾರ ನ್ಯಾಯಾಲಯದ ಆಧುನೀಕರಣಕ್ಕೆ ಕೋಟ್ಯಂತರ ರೂಪಾಯಿ ಹಣ ನೀಡಿದ್ದಾರೆ. ಆದರೆ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದನ್ನು ವಕೀಲರು ಯೋಚಿಸಬೇಕು. ಹತ್ತು ವರ್ಷಕ್ಕಿಂತಲೂ ಹೆಚ್ಚಿನ
ಪ್ರಕರಣಗಳು ಕೂಡ ನ್ಯಾಯಾಲಯದಲ್ಲಿದೆ. ಹೊಸದಾಗಿ ಬಂದಿರುವ ವಕೀಲರು ಬೇರೆ ಕಡೆ ಗಮನ ನೀಡದೆ, ನಮಗೆ ಅನ್ನ ಕೊಡುವ ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು. 65 ಲಕ್ಷ ಲೋಕ ಅದಾಲತ್ನಲ್ಲಿ ಪ್ರಕರಣ ಇತ್ಯರ್ಥ ಮಾಡಿ ರಾಷ್ಟ್ರದಲ್ಲಿಯೇ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಯಿತು ಎಂದು ಹೇಳಿದರು.
ವಕೀಲರು ತಮ್ಮ ಜೂನಿಯರ್ ಗಳನ್ನು ಮತ್ತು ಹೆಣ್ಣು ಮಕ್ಕಳನ್ನು ಕರೆದುಕೊಂಡು ಗ್ರಾಮೀಣ ಭಾಗಕ್ಕೆ ಹೋಗಿ ಕಾನೂನು ಅರಿವು ಶಿಬಿರವನ್ನು ಆಯೋಜಿಸಬೇಕು. ಇದರಿಂದಾಗಿ ತ್ವರಿತವಾಗಿ ನ್ಯಾಯ ಕೊಡಿಸಬಹುದು. ಸ್ವಂತ ಬೆಳವಣಿಗೆಯಿಂದ ಸಮಾಜವನ್ನು ಮರೆಯಬಾರದು ಎಂದು ಕೋರಿದರು.
ನಮ್ಮಲ್ಲಿ ಚಿನ್ನ ದೋಚಿಕೊಂಡು ಹೋದರು. ಬಿಜಿಎಂಎಲ್ ಕಾರ್ಮಿಕರು ಪೆನ್ಷನ್ ಕೊಟ್ಟಿಲ್ಲ ಎಂದು ಹೈಕೋರ್ಟಗೆ ಬಂದಿದ್ದರು. ಕೊಡದೆ ಇದ್ದರೆ ಜೈಲಿಗೆ ಹಾಕಿ ಎಂದಿದ್ದೆ. ನಾವು ಬಡವರ ಪರವಾಗಿ ಇರಬೇಕು. ಅವರ ಕಷ್ಟಕ್ಕೆ ಸ್ಪಂದಿಸಬೇಕು. ಅನ್ಯಾಯಕ್ಕೆ ಒಳಗಾದವರು ತಾವೇ ಅನ್ಯಾಯವಾದವರು ಎಂಬ ಭಾವನೆಯಿಂದ ನ್ಯಾಯ ವಿಲೇವಾರಿ ಮಾಡಬೇಕು. ನಾವು ಪಾತ್ರಧಾರಿಗಳಾಗಬೇಕು ಎಂದರು.
ನ್ಯಾಯಾಧೀಶ ಮೊಹಮದ್ ನವಾಜ್ ಮಾತನಾಡಿ, ದಾಖಲೆ ಕೊಠಡಿ, ಮಹಿಳೆಯರ ಕೊಠಡಿ, ಗ್ರಂಥಾಲಯ, ಧ್ಯಾನ ಕೇಂದ್ರ, ನ್ಯಾಯಾಲಯವನ್ನು ಹೊಸ ಕಟ್ಟಡದಲ್ಲಿ ನಿರ್ಮಾಣ ಮಾಡಲಾಗಿದೆ. ಇಷ್ಟೆಲ್ಲಾ ಅನುಕೂಲಗಳನ್ನು ಮಾಡಿಕೊಡಲಾಗಿದೆ. ಈಗ ವಕೀಲರು ತಮ್ಮ ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದರು.
ನ್ಯಾಯಾಧೀಶ ಎನ್.ಸಂಜಯಗೌಡ ಮಾತನಾಡಿದರು. ರಿಜಿಸ್ಟ್ರಾರ್ ಕೆ.ಎಸ್.ಭರತ್ಕುಮಾರ್, ಜಿಲ್ಲಾ ನ್ಯಾಯಾಧೀಶ ಶುಕ್ಲಾಲಾಕ್ಷ ಪಾಲನ್, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ, ಕಾರ್ಯದರ್ಶಿ ಕೆ.ಸಿ.ನಾಗರಾಜ್, ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಆರ್.ಚಂದ್ರಶೇಖರ್ ಹಾಜರಿದ್ದರು. ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರು ಹಾಜರಿದ್ದರು.
CJ Prasanna B at the inauguration of KGF court new building. Lawyers should cooperate in settling the case