ಸುದ್ದಿಮೂಲ ವಾರ್ತೆ
ಯಾದಗಿರಿ,ಜೂ.16:ಮಕ್ಕಳ ಅಪೌಷ್ಟಿಕತೆ ನಿವಾರಣೆ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಹಾಗೂ ಪೋಕ್ಸೋ ಕಾಯ್ದೆ ಅಡಿ ದಾಖಲಾದ ಪ್ರಕರಣಗಳಲ್ಲಿ ಸಂಬಂಧಿತ ಮಕ್ಕಳಿಗೆ ನ್ಯಾಯ ಒದಗಿಸುವುದು ಸೇರಿದಂತೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಪಟ್ಟ ಅಧಿಕಾರಿಗಳು ವಿಶೇಷ ಗಮನ ನೀಡುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶ್ರೀ ಶಶಿಧರ ಕೋಸಂಬೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಮಕ್ಕಳ ರಕ್ಷಣಾ ವ್ಯವಸ್ಥೆಯ ಕುರಿತು ಭಾಗೀದಾರರೊಂದಿಗೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯ ಮುಂಡರಗಿ, ವರ್ಕನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಅವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪೋಕ್ಸೋ ಕಾಯಿದೆ ಅಡಿ ಇಲ್ಲಿ ಪ್ರಕರಣ ದಾಖಲಾಗಿರುವುದರಿಂದ ಈ ವಸತಿ ನಿಲಯಗಳ ವ್ಯವಸ್ಥೆ ಸುಧಾರಣೆಗೆ ವಿಶೇಷ ಗಮನ ನೀಡಬೇಕು, ಕುಡಿಯುವ ನೀರು, ಶೌಚಾಲಯ, ಸಮರ್ಪಕ ನೀರು ಪೂರೈಕೆ, ಸ್ವಚ್ಛತೆ ,ಅವಶ್ಯಕ ಮೂಲ ಸೌಕರ್ಯ ಗಳ ಪೂರೈಕೆಯ ಅವಶ್ಯಕತೆ ಇದ್ದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿಗಾದಲ್ಲಿ ಅವಶ್ಯಕ ಮೂಲ ಸೌಕರ್ಯ ಕಲ್ಪಿಸುವಂತೆ ಅವರು ಸಲಹೆ ನೀಡಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 2005 ರ ಕಾಯ್ದೆ ಹಾಗೂ 2006 ರ ಅಡಿಯಲ್ಲಿ ಸ್ವತಂತ್ರ ಶಾಸನಬದ್ದ ಅಂಗ ಸಂಸ್ಥೆಯಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ದೂರುಗಳನ್ನು ವಿಚಾರಣೆಗೆ ಒಳಪಡಿಸಿ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಕ್ಕೆ ಸಿವಿಲ್ ನ್ಯಾಯಾಲಯದಂತೆ ಕಾರ್ಯನಿರ್ವಹಿಸುವ ಅಧಿಕಾರ ಹೊಂದಿದ್ದು ,ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ದಾಖಲಾದ ಪ್ರಕರಣಗಳಲ್ಲಿ ನೊಂದ ಸಂತ್ರಸ್ತರಿಗೆ ತಕ್ಷಣ ಸಂಬಂದಿಸಿದ ಇಲಾಖೆಗಳ ಅಧಿಕಾರಿಗಳು ಸ್ಪಂದಿಸಬೇಕು .ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಸ್ಪಂದಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಸ್ವ-ಪ್ರೇರಣೆಯಿಂದ ( ಸುವೋ ಮೋಟೋ) ದೂರು ದಾಖಲಿಸಿಕೊಂಡು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ 2009 ರ ಅಡಿಯಲ್ಲಿ 6 ರಿಂದ 14 ವರ್ಷದೊ ಳಗಿನ ಪ್ರತಿ ಮಗು ಪ್ರಾಥಮಿಕ ಶಿಕ್ಷಣ ಪೂರ್ಣ ಗೊಳಿಸುವವರೆಗೆ ಶಿಕ್ಷಣ ಪಡೆಯುವ ಹಕ್ಕನ್ನು ಪಡೆದಿದ್ದಾರೆ. ಅದರಂತೆ ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ (ಪೋಕ್ಸೋ) ಕಾಯಿದೆ ಜಾರಿ ಕುರಿತು ಮತ್ತು ಉಸ್ತುವಾರಿ ಹಾಗೂ ಸೆಕ್ಷನ್ 44 ರ ಜಾರಿ ಹಾಗೂ ಉಸ್ತುವಾರಿಯ ಜವಾಬ್ದಾರಿ ಹೊಂದಿದ್ದು, ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ 2005 ಸೆಕ್ಷನ್ 13 ರ ಅಡಿಯಲ್ಲಿ ಜವಾಬ್ದಾರಿಯನ್ನು ಸಹ ಗೊತ್ತುಪಡಿಸಲಾಗಿದೆ. ಅದರಂತೆ 2015 ರ ಬಾಲ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯಿದೆಯ ಜಾರಿ ಹಾಗೂ ಉಸ್ತುವಾರಿಯ ಜವಾಬ್ದಾರಿಯನ್ನು ಸಹ ಆಯೋಗ ಹೊಂದಿದ್ದು, ವಿವಿಧ ಇಲಾಖೆಗಳು ಸಹಕಾರದೊಂದಿಗೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಇಂದು ವಿವಿಧ ಅಂಗನವಾಡಿ ಕೇಂದ್ರಗಳು, ವಸತಿ ನಿಲಯಗಳು, ಶಿಶುಪಾಲನ ಕೇಂದ್ರ, ಸರಕಾರಿ ಬಾಲಕಿಯ ಬಾಲ ಮಂದಿರಗಳಿಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಲಾಗಿದೆ.
ವರ್ಕನಳ್ಳಿ ಹಾಗೂ ಮುಂಡರಗಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಅವ್ಯವಸ್ಥೆಯನ್ನು ತಕ್ಷಣ ಸರಿ ಪಡಿಸಬೇಕು. ಗುಣಮಟ್ಟದ ಆಹಾರ, ಕುಡಿಯುವ ನೀರು, ಹಾಸಿಗೆಗಳ ವ್ಯವಸ್ಥೆ ಸೇರಿದಂತೆ ಅವಶ್ಯಕ ಮೂಲ ಸೌಕರ್ಯ ್ಯಗಳನ್ನು ತಕ್ಷಣ ಕಲ್ಪಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಭೇಟಿ ನೀಡಿ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ಅದರಂತೆ ವಸತಿ ನಿಲಯಕ್ಕೆ ಆಗಮಿಸದೆ ಇರುವ ಪ್ರಾಂಶುಪಾಲರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಬೇಕು. ಈ ಕುರಿತಂತೆ ಮಕ್ಕಳ ಕಲ್ಯಾಣ ಸಮಿತಿಯಿಂದಲೂ ನಂತರ ಪರಿಶೀಲಿಸಿ ಆಯೋಗಕ್ಕೆ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ವಸತಿ ನಿಲಯಗಳ ಸಮರ್ಪಕ ನಿರ್ವಹಣೆ, ಮೂಲ ಸೌಕರ್ಯ ್ಯ ಕಲ್ಪಿಸುವುದು ಹಾಗೂ ಯಾದಗಿರಿ ನಗರ ಕಲ್ಲುರು ಲೇಔಟ್ನಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆ, ಲಿಂಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಅವ್ಯವಸ್ಥೆಗಳನ್ನು ತಕ್ಷಣ ಸರಿ ಪಡಿಸಬೇಕು. ಮುಂಡರಗಿ, ಹೊಸಳ್ಳಿ ಸೇರಿದಂತೆ ವಿವಿಧ ಅಂಗನವಾಡಿ ಕೇಂದ್ರಗಳಿವಗೆ ಗುಣಮಟ್ಟದ ಸಮರ್ಪಕ ಆಹಾರ ವಿತರಣೆ, ಮೊಟ್ಟೆ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಮೇಲ್ವಿಚಾರಣೆಗೆ ನಿರ್ಲಕ್ಷ್ಯತೆ ತೋರಿದವರಿಗೆ ತಕ್ಷಣ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಅವರು ಸೂಚನೆ ನೀಡಿದರು.
ಸರ್ಕಾರದ ಯೋಜನೆಗಳು ಬಡವರಿಗೆ ಹಾಗೂ ದುರ್ಬಲರಿಗೆ ತಲುಪಬೇಕು. ಅದರಲ್ಲಿಯೂ ಈ ಭಾಗದ ಅಪೌಷ್ಟಿಕ ಮಕ್ಕಳ ಆರೋಗ್ಯ ವೃದ್ಧಿಗೆ ವಿಶೇಷ ಗಮನ ನೀಡಬೇಕು. ಮುಂದಿನ ದಿಗಳಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಜಿಲ್ಲೆಯಾದ್ಯಂತ ಭೇಟಿ ನೀಡಿ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕು.
ಆಯಾ ವಸತಿ ನಿಲಯಗಳಲ್ಲಿ ದೂರು ಪೆಟ್ಟಿಗೆ ಮೇಲು ಉಸ್ತುವಾರಿ ಮಾಡುವ ಬಗ್ಗೆ ಪೊಲೀಸ ಇಲಾಖೆಯಿಂದ ಸೂಕ್ತ ನಿಗಾ ಇಡಬೇಕು.ಪೋಕ್ಸೋ ಪ್ರಕರಣಗಳು ಹೆಚ್ವಾಗಿ ಆಗದಂತೆ ನಿಗಾ ವಹಿಸಬೇಕು. ಶಾಲಾ ಕಾಲೇಜುಗಳಿಗೆ ವೇಗದೂತ ಬಸಗಳಲ್ಲಿ ತೆರಳಲು ಪಾಸ್ ಗಳ ಮೂಲಕ ಅವಕಾಶ ಕಲ್ಪಿಸಬೇಕು.
ಖಾಸಗಿ ಶಾಲಾ ವಾಹನಗಳು ಆ ಸನಕ್ಕೆ ತಕ್ಕಂತೆ ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ಸೇರಿಸಿಕೊಳ್ಳಬಾರದು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ವಸತಿ ನಿಲಯಗಳ ವ್ಯವಸ್ಥೆ ಸುಧಾರಣೆಗೆ ಅವಶ್ಯಕ ಗಮನ ನೀಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣಾಧಿಕಾರಿಗಳಾದ ಪ್ರೇಮ್ ಮೂರ್ತಿ, , ಬಾಲ ನ್ಯಾಯಾಲಯ ಮಂಡಳಿಯ ಸದಸ್ಯರಾದ ಚಂದ್ರಕಾಂತ ಎಸ್.ಕಟ್ಟಿಮನಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಹನಮಂತ್ರಾಯ ಕರಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಚಂದ್ರಶೇಖರ್ ಲಿಂಗದಳ್ಳಿ, ಬಸವರಾಜ ಪಾಟೀಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.