ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಸೆ.28:ಜೀವನ ಮಟ್ಟ, ಸಂಪನ್ಮೂಲ ಕ್ರೋಢೀಕರಣ, ಮೂಲ ಸೌಕರ್ಯ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಉತ್ತಮ ಅಡಳಿತ, ಸೇವಾ ಪೂರೈಕೆ ಮತ್ತು ನಾವೀನ್ಯತೆ ಯೋಜನೆಗಳ ವಿವಿಧ ಮಾನದಂಡಗಳನ್ನು ಒಳಗೊಂಡಂತೆ ಪಂಚಾಯತ್ ರಾಜ್ ಇಲಾಖೆ ನೀಡುವ ಈ ಸಾಲಿನ ಗ್ರಾಮ ಪುರಸ್ಕಾರಕ್ಕೆ ಪೂರ್ವ ತಾಲ್ಲೂಕಿನ ಆವಲಹಳ್ಳಿ ಗ್ರಾಮ ಪಂಚಾಯತಿ ಆಯ್ಕೆಯಾಗಿದೆ.
ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯತ್ ವ್ಯಾಪ್ತಿಗೆ ಬರುವ ಆವಲಹಳ್ಳಿ ಗ್ರಾಮ ಪಂಚಾಯತಿ ಆವಲಹಳ್ಳಿ, ಚೀಮಸಂದ್ರ, ವಿರೇನಹಳ್ಳಿ ಗ್ರಾಮಗಳನ್ನು ಒಳಗೊಂಡಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿ ಮೂಲ ಸೌಕರ್ಯ ಕಸ ನಿರ್ವಹಣೆ, ಗ್ರಾಮ ಸಭೆ, ಕರ ನಿರ್ವಹಣೆಯಂತಹ ಮಾದರಿ ಕೆಲಸಗಳ ಮೂಲಕ ಜನಮನ್ನಣೆ ಗಳಿಸಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ, ಕೆರೆ ಕಟ್ಟೆಗಳ ದಡಗಳಲ್ಲಿ ಗಿಡನೇಡುವ ಕಾರ್ಯಕ್ರಮ, ಕೆರೆ ಸ್ವಚ್ಛತೆ ಕಾಪಾಡುವುದು. ಚರಂಡಿ ಸ್ವಚ್ಛತೆ, ರಸ್ತೆಗಳ ನಿರ್ಮಾಣ, ಸರ್ಕಾರಿ ಸ್ವಾಮ್ಯದ ಕಟ್ಟಡಗಳನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳುವುದು ಹಲವಾರು ಮಹತ್ವದ ಪಾತ್ರವನ್ನು ಗ್ರಾಮ ಪಂಚಾಯತಿ ನಿರ್ವಹಣೆ ಮಾಡಿದೆ.
ಆವಲಹಳ್ಳಿ ಗ್ರಾಮ ಪಂಚಾಯತಿಗೆ ಒಳಪಡುವ ಆವಲಹಳ್ಳಿ, ಚೀಮಸಂದ್ರ, ವಿರೇನಹಳ್ಳಿ ಗ್ರಾಮಗಳಲ್ಲಿ ಕೆರೆ ನೆಡುವ ಕಾರ್ಯಕ್ರಮ, ಕರ ವಸೂಲಿ, ಗ್ರಾಮ ಸಭೆ, ಕಸ ನಿರ್ವಹಣೆಯಂತ ಕೆಲಸಗಳನ್ನು ಹಂತಹಂತವಾಗಿ ಮಾಡುತ್ತ ಬರಲಾಗುತ್ತಿದೆ. ಗ್ರಾಮಗಳಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯ ಒದಗಿಸಲು ಸತತವಾಗಿ ಶ್ರಮಿಸಲಾಗುತ್ತದೆ ಎಂದು ಆವಲಹಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಅಮರೇಶ ಹೇಳಿದರು.
ಆವಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತೆ, ನರೇಗಾ ಕಾಮಗಾರಿಗಳ ಅನುದಾನ ಬಳಕೆ, ಸರ್ಕಾರಿ ದಾಖಲೆಗಳ ನಿರ್ವಹಣೆ, ಗ್ರಾಮ ಸಭೆ, ಸ್ವಸಹಾಯ ಸಂಘಗಳಿಗೆ ಸಹಾಯ ಹಸ್ತ ಚಾಚುವುದು, ಎಸ್ಸಿ, ಎಸ್ಟಿ ಹಾಗೂ ವಿಶೇಷ ಚೇತನರಿಗೆ ಅತ್ಯಗತ್ಯವಾದ ಸೌಕರ್ಯ ಒದಗಿಸುವ ಮೂಲಕ ಜನರ ಜೀವನ ಮಟ್ಟ ಸುಧಾರಣೆ ತರಲು ಗ್ರಾಮ ಪಂಚಾಯತಿ ಶ್ರಮಿಸಿದೆ. ಗ್ರಾಮ ಪಂಚಾಯತಿ ಸಾಧನೆಯನ್ನು ಪರಿಗಣಿಸಿ ಪಂಚಾಯತ್ ರಾಜ್ ಇಲಾಖೆ ಆವಲಹಳ್ಳಿ ಗ್ರಾಮ ಪಂಚಾಯತಿಯನ್ನು ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ಗ್ರಾಮ ಪುರಸ್ಕಾರಕ್ಕೆ ಪಾತ್ರರಾಗಿದ್ದು ಖುಷಿ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಲು ಅವಕಾಶ ನೀಡಿದಂತಾಗಿದೆ ಎಂದು ಆವಲಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನವೀತಾ ತೇಜಗೌಡ ಹೇಳಿದರು.