ಸುದ್ದಿಮೂಲ ವಾರ್ತೆ
ರಾಮನಗರ,ಜೂ.29: ರೋಟರಿ ಸಿಲ್ಕ್ ಸಿಟಿ ಶಾಖೆ, 2022-23ನೇ ಸಾಲಿನ ರೋಟರಿ ಜಿಲ್ಲಾ 3190 ವ್ಯಾಪ್ತಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಣೆಗಾಗಿ ಗುರುತಿಸಿಕೊಂಡಿದೆ ಎಂದು ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಶಿವರಾಜ್.ಆರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಲ್ಕ್ಸಿಟಿ ಸ್ಥಾಪನೆಯಾಗಿ 7 ವರ್ಷ ಸಂದಿದೆ. ಎಲ್ಲಾ ವರ್ಷಗಳಲ್ಲೂ ಅತ್ಯುತ್ತಮ ಸಾಧನೆಗೆ ಪ್ರಶಸ್ತಿಗಳು ಲಭ್ಯವಾಗಿವೆ. ನಗರದ ಐಜೂರು ವೃತ್ತದಲ್ಲಿ ಕರುಣೆಯ ಗೂಡು ಎಂಬ ಯೋಜನೆ ಅನುಷ್ಠಾನವಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮತ್ತು ಆಟೋ ನಿಲ್ದಾಣದ ಬಳಿ ಇರುವ ಈ ವ್ಯವಸ್ಥೆಯಲ್ಲಿ ಸಾರ್ವಜನಿಕರು ತಾವು ಉಪಯೋಗಿಸಿದ ಬಟ್ಟೆಗಳನ್ನು ಇಲ್ಲಿ ಇಡುತ್ತಾರೆ. ಅಗತ್ಯ ಇರುವವರು ನೇರವಾಗಿ ಇಲ್ಲಿ ಬಂದು ತಮಗೆ ಇಷ್ಟವಾದ ಬಟ್ಟೆಯನ್ನು ಕೊಂಡೊಯ್ಯುತ್ತಾರೆ. ಕರುಣೆಯ ಗೂಡು ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿದೆ ಎಂದು ತಿಳಿಸಿದರು.
ಸೀರಹಳ್ಳದಲ್ಲಿ ಪ್ರವಾಹವುಂಟಾಗಿ ಅರ್ಕೇಶ್ವರ ಕಾಲೋನಿ ಮುಂತಾದ ಬಡಾವಣೆಗಳಲ್ಲಿ ವಾಸಿಸುವ ಮನೆಗಳಿಗೆ ನೀರು ನುಗ್ಗಿ ತೀವ್ರ ಹಾನಿ ಮಾಡಿತ್ತು. ಸುಮಾರು 30 ಲಕ್ಷ ರೂ. ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ಒದಗಿಸಲಾಗಿತ್ತು ಎಂದರು.
ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷ ಎನ್.ರವಿಕುಮಾರ್, ಮುಂಬರುವ ದಿನಗಳಲ್ಲಿ ಅಂಧರು ಬಳಸಲು ಅತ್ಯಾಧುನಿಕ ವಾಕಿಂಗ್ ಸ್ಟಿಕ್ನ್ನು ಆಮದು ಮಾಡಿಕೊಂಡು ಬಿಜಿಎಸ್ ಶಾಲೆಯ ಅಂಧ ವಿದ್ಯಾರ್ಥಿಗಳಿಗೆ ವಿತರಿಸುವ ಉದ್ದೇಶವಿದೆ. ವಿದ್ಯಾರ್ಥಿಗಳು ರಸ್ತೆಯಲ್ಲಿ ಈ ವಾಕಿಂಗ್ ಸ್ಟಿಕ್ ಬಳಸಿಕೊಂಡು ನಡೆದು ಹೋಗುವಾಗ ಎದುರಾಗುವ ಅಡೆತಡೆಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಇಂತಹ ಅಧುನಿಕ್ ವಾಕಿಂಗ್ ಸ್ಟಿಕ್ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಉದ್ದೇಶವಿದೆ ಎಂದರು.
ಸುನಿಲ್ ಮಾತನಾಡಿ ಕಳೆದ 7 ವರ್ಷಗಳಿಂದ ರೋಟರಿ ಸಿಲ್ಕ್ ಸಿಟಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಕ್ಯಾನ್ಸರ್ ಪತ್ತೆ ಶಿಬಿರಗಳಲ್ಲಿ ಪತ್ತೆಯಾಗುವ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ಕೊಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಈ ವೇಳೆ ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷ ಬಿ.ಗೋಪಾಲ್, ಎ.ಜೆ.ಸುರೇಶ್, ಪ್ರಮುಖರಾದ, ಶ್ರೀಧರ್, ಆರ್.ಲತಾ ಗೋಪಾಲ್, ನವೀನ್, ರಾಮು, ಪುರುಷೋತ್ತಮ, ರಾಘವೇಂದ್ರ, ಗಂಗಾಧರ್, ಅಭಿಷೇಕ್, ಪ್ರಕಾಶ್, ಸುಹಾಸ್, ರಾಮಲಿಂಗಯ್ಯ ಮುಂತಾದವರು ಹಾಜರಿದ್ದರು.