ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.31: ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ವತಿಯಿಂದ 6ನೇ ಘಟಿಕೋತ್ಸವದ ಅಂಗವಾಗಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ನೀಡಲಾಗಿರುವ ಗೌರವ ಡಾಕ್ಟಾರೇಟ್ ಅನ್ನು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯು ಜ್ಞಾನ, ವಿಜ್ಞಾನ, ಕಲೆ ಮತ್ತು ಸಂಗೀತದ ಅಮೂಲ್ಯ ಪರಂಪರೆಯನ್ನು ಒಳಗೊಂಡಿದೆ. ಹೆಸರಾಂತ ಶಾಸ್ತ್ರೀಯ ಸಂಗೀತ ಗಾಯಕಿ, ಗೌರವಾನ್ವಿತ ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಈ ವಿಶ್ವವಿದ್ಯಾಲಯವು ಸಂಸ್ಕೃತಿ, ಕಲೆ ಮತ್ತು ಸಂಗೀತದ ಅಮೂಲ್ಯ ಪರಂಪರೆಯನ್ನು ಮುನ್ನಡೆಸುವಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ ಎಂದರು.
ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಶಿಕ್ಷಣ, ಕಲೆ, ಸಂಗೀತ ಮತ್ತು ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದ ಮಹನೀಯರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಅದರಂತೆ ಈ ದಿನ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿರುವುದು ಧನ್ಯತಾ ಭಾವವನ್ನು ತುಂಬಿದೆ ಎಂದರು.
ಭಾರತದ ‘ಉಕ್ಕಿನ ಮನುಷ್ಯ’, ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಅವರಿಗೆ ನಮನ ಸಲ್ಲಿಸುತ್ತಾ, ರಾಷ್ಟ್ರೀಯ ಏಕತಾ ದಿನದಂದು ಎಲ್ಲಾ ದೇಶವಾಸಿಗಳಿಗೆ ಶುಭಾಶಯ ತಿಳಿಸಿದರು. ಸರ್ದಾರ್ ಪಟೇಲ್ ಅವರ ದೇಶಕ್ಕೆ ಸಮರ್ಪಿತ ಜೀವನ ಮತ್ತು ದೇಶದ ಮೊದಲ ಗೃಹ ಸಚಿವರಾಗಿ ಅವರ ರಾಷ್ಟ್ರ ನಿರ್ಮಾಣ ಕಾರ್ಯವು ನಮಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಲಪತಿ, ಪ್ರಾಧ್ಯಾಪಕ ನಾಗೇಶ್ ವಿ.ಬೆಟ್ಟಕೋಟೆ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.